ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಸಂವಿಧಾನ ಓದು ಜಾಗೃತಿ ಸಭೆ
ತುಮಕೂರು : 1949ನೇ ನವೆಂಬರ್ 26ರಂದು ಸಂವಿಧಾನ ಸಭೆಯಲ್ಲಿ ಭಾರತದ ಪ್ರಜೆಗಳಾದ ನಾವು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡ ಭಾರತದ ಸಂವಿಧಾನಕ್ಕೆ 72 ವರ್ಷಗಳಾಗಿವೆ ಸಂವಿಧಾನದ ಮೌಲ್ಯಗಳು ಈ 72 ವರ್ಷಗಳಲ್ಲಿ ಜಾರಿ ಮಾಡಲು ಆಳುವ ಸರ್ಕಾರಗಳು ಪ್ರಯತ್ನಿಸಿವೆ ಆದರೆ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಅನುಷ್ಠಾನಗೊಳ್ಳಲು ಸಾಧ್ಯವಾಗದೇ ಸಂವಿಧಾನ ಖಾತ್ರಿಯ ಮಾನವ ಘನತೆ ದೇಶದಲ್ಲಿರುವ ಬಹುಸಂಖ್ಯಾತ ಬಡಜನರಿಗೆ ಪ್ರಶ್ನಾರ್ಥಕವಾಗಿದೆ, ಆದರೆ ಸಂವಿಧಾನ ಜಾರಿಯಾಗಿರುವುದರಿಂದ ದೇಶದಲ್ಲಿ ಬಡಜನರು ಉಸಿರಾಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಎ.ನರಸಿಂಹಮೂರ್ತಿ ಹೇಳಿದರು, ಇಂದು ನಗರದ ಸಂಪಾಧನೆ ಮಠ ಸ್ಲಂನಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಜಾಗೃತಿ ಸಭೆಯಲ್ಲಿ ಪೀಠಿಕೆಯನ್ನು ಬೋದಿಸುವ ಕಾರ್ಯಕ್ರಮವನ್ನು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಸಂವಿಧಾನದ ಪೀಠಿಕೆಯನ್ನು ಬೋಧಿಸಿ ಮಾತನಾಡಿದ ಅವರು ಇಂದು ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಓದುವುದಕ್ಕೆ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ ಸಂವಿಧಾನ ಜಾರಿಯಾಗಿ 72 ವರ್ಷಗಳು ಕಳೆದ ಮೇಲೆ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಿಸಲಾಗುತ್ತಿದ್ದು ಜನಸಾಮಾನ್ಯರಿಗೆ ಸಂವಿಧಾನದ ಅರಿವೇ ಇಲ್ಲದಿರುವುದು ವಿಪರ್ಯಾಸವಾಗಿದೆ ಸಂವಿಧಾನ ಸರ್ಕಾರ ಮತ್ತು ಜನಸಾಮಾನ್ಯರಿಗಿರುವ ಸಂಬಂಧವನ್ನು ಉಲ್ಲೇಖಿಸಿದ್ದು ಆಳುವ ಸರ್ಕಾರಗಳು ಜನಸಾಮಾನ್ಯರಿಗೆ ಸಂವಿಧಾನ ಖಾತ್ರಿಗೊಳಿಸಿರುವ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ ಧರ್ಮದ ಉಪಾಸನೆಯ ಸ್ವಾತಂತ್ರö್ಯವನ್ನು ಸ್ಥಾನಮಾನ ಹಾಗೂ ಅವಕಾಶಗಳ ಸಮಾನತೆಯನ್ನು ದೊರಕಿಸುವುದರ ಬದಲು ಅಲಿಖಿತ ಸಂವಿಧಾನವಾದ ಮನುವಾದವನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಗೆ ಸವಾಲಾಗುವಂತೆ ಮಾಡಿ ಬ್ರಾತೃತ್ವ ಭಾವನೆಯನ್ನು ನೆಲೆಗೊಳಿಸುವ ಬದಲು ವಿಭಜಿಸಿ ಒಡೆದಾಡುವ ವಾತಾವರಣವನ್ನು ಸೃಷ್ಠಿ ಮಾಡಿರುವುದು ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ದಕ್ಕೆ ಆಗುವುದರ ಜೊತೆಗೆ ಸಂವಿಧಾನ ವಿರೋಧಿ ನಡೆಯಾಗಿದೆ.
ಸರ್ವರಿಗೂ ಸಮಪಾಲು, ಸಮಬಾಳು ಆಶಯ ಮರಿಚಿಕೆಯಾಗಿದ್ದು ಶ್ರೇಣಿಕರಣ, ಬಡವ ಶ್ರೀಮಂತರ ಅಂತರ ಹೆಚ್ಚಾಗುತ್ತಿದ್ದು ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ಇಡಲಾಗುತ್ತಿದೆ. ಆದ್ದರಿಂದ ದೇಶದ ನಾಗರೀಕರಿಗೆ ಸಂವಿಧಾನ ಖಾತ್ರಿಗೊಳಿಸಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳುವ ಮೂಲಕ ಜಾಗೃತರಾದರೇ ಜನಸಾಮಾನ್ಯರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಗಮಾತ್ರ ಸಂವಿಧಾನ ಬಲಗೊಳ್ಳಲು ಸಾಧ್ಯ ಯಾವುದೇ ಬಲಪಂಥಿಯ ಶಕ್ತಿ ಸಂವಿಧಾನವನ್ನು ಸಡಿಲಗೊಳಿಸಲು ಸಾಧ್ಯವಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್.ಟಿ.ಜಿ ಕಣ್ಣನ್, ಶಂರಯ್ಯ, ತಿರುಮಲಯ್ಯ, ಶಾರದಮ್ಮ, ಮಂಗಳಮ್ಮ,ಸುಧಾ, ನಿರ್ಮಲ, ಹನುಮಕ್ಕ,ಗಂಗಮ್ಮ,ಚಕ್ರಪಾಣಿ, ಸಂಪಾಧನೆ ಮಠ ಸ್ಲಂ ಶಾಖಾ ಸಮಿತಿಯ ಲಕ್ಷ್ಮೀಪತಿ, ಸ್ವಾಮಿ, ಗೌರಮ್ಮ, ಮಹಾದೇವಮ್ಮ, ಶಾರದಮ್ಮ, ಸಿದ್ದರಾಜು, ಪ್ರಶಾಂತಪ್ಪ, ಮುಂತಾದವರು ಪಾಲ್ಗೊಂಡಿದ್ದರು