ಪಾವಿತ್ರ್ಯತೆ, ಸಂಸ್ಕಾರ ದೇಶದ ಸನ್ನಡತೆಗೆ ತುಮಕೂರು ಜಿಲ್ಲೆ ಹೆಸರು ಗಳಿಸಿದೆ : ಸಚಿವ ವಿ. ಸೋಮಣ್ಣ
ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ
ತುಮಕೂರು: ಪ್ರಕೃತಿಯ ಮುನಿಸಿನಿಂದಾಗಿ ಮಳೆಯಿಂದ ಬೆಳೆ, ಮನೆ ಹಾನಿ ಉಂಟಾಗಿದೆ. ಹಾನಿಗೊಳಗಾದ ರೈತರಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಈಗಾಗಲೇ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಸಂಬಂಧ ಮುಖ್ಯಮಂತ್ರಿಗಳ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಪರಿಹಾರವನ್ನು ನಷ್ಟ ಅನುಭವಿಸಿರುವ ರೈತರು ಮತ್ತು ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದರು.
ನಗರದ ಅರಳೇಪೇಟೆ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭೀಷೇಕ ಮಹೋತ್ಸವದ ಅಂಗವಾಗಿ ನಡೆದ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಬ್ರಮರಾಂಭ ಅಮ್ಮನವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇವಾಲಯದ ಪ್ರಾರಂಭೋತ್ಸವ ನಾಮಫಲಕವನ್ನು ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ಜಾಣ್ಮೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ಅಗತ್ಯ ಪರಿಹಾರ ಕೊಡಲು ಕ್ರಮ ವಹಿಸಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ನಿನ್ನೆಯಿಂದ ಕೊರೊನಾ 3ನೇ ಅಲೆಯ ಸೂಚನೆ ಕಂಡು ಬರುತ್ತಿದ್ದು, ಈಗಾಗಲೇ ಪ್ರಧಾನ ಮಂತ್ರಿಗಳು ಸೋಂಕು ಹರಡದಂತೆ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಅದರೆ ರಾಜ್ಯದಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಾನೂನು ಚೌಕಟ್ಟಿನಲ್ಲಿ ಲೋಕಾಯುಕ್ತ ಹಾಗೂ ಎಸಿಬಿ ಎರಡೂ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಭ್ರಷ್ಟರ ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ ಎಂದರು.
ನನ್ನ 50 ವರ್ಷದ ರಾಜಕಾರಣದ ಇತಿಹಾಸದಲ್ಲಿ ಸಾಕಷ್ಟು ಗುಡಿ ಗೋಪುರ, ದೇವಾಲಯಗಳನ್ನು ನೋಡಿದ್ದೇನೆ. ಅರಳೇಪೇಟೆಯಲ್ಲಿ ಸಮಾಜದ ಬಂಧುಗಳು ನಿರ್ಮಿಸಿರುವ ಈ ದೇವಾಲಯ ಪುರಾತನ ಇತಿಹಾಸ ಹೊಂದಿದೆ. ಇದು ಕೇವಲ ಒಂದು ಸಮಾಜದ ದೇವಾಲಯವಲ್ಲ, ಎಲ್ಲ ವರ್ಗದ ದೇವಾಲಯ ಎಂದ ಅವರು, ಜಾತ್ಯಾತೀತವಾದ ನಂಬಿಕೆ, ಧಾರ್ಮಿಕ ಭಾವನೆಯನ್ನು ಉಳಿಸಿಕೊಂಡು ಬರುವ ಪವಿತ್ರವಾದ ಸ್ಥಳ ಇದಾಗಿದೆ ಎಂದರು.
ತುಮಕೂರು ಜಿಲ್ಲೆ ಪಾವಿತ್ರ್ಯತೆ, ಸಂಸ್ಕಾರಕ್ಕೆ ದೇಶದ ಸನ್ನಡತೆಗೆ ಹೆಸರು ಗಳಿಸಿರುವ ಜಿಲ್ಲೆ. ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕರ್ಮಭೂಮಿಯಾಗಿರುವುದರಿಂದ ಪಾವಿತ್ರ್ಯತೆಯ ಜತೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದೆ ಎಂದರು.
ಟಿ.ಬಿ.ಶೇಖರ್ ಮಾತನಾಡಿ, ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿದ್ದು, ಹರಗುರುಚರಮೂರ್ತಿಗಳಾದ ಎಡೆಯೂರಿನ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ನೊಣವಿನಕೆರೆಯ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಗಡಿ ಜಂಗಮ ಮಠದ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ, ಎಸ್‌ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸವಪ್ಪ, ಜಿ.ಎಚ್. ಪರಮಶಿವಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು ಎಂದರು.
ದೇವಾಲಯದ ಜೀರ್ಣೋದ್ಧಾರ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು ಅನ್ನದಾಸೋಹ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಈ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕರಿಸಿ ದೇಣಿಗೆ ನೀಡಿದ ದಾನಿಗಳಿಗೆ, ಸಮಾಜದ ಬಂಧುಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಅವರು ಹೇಳಿದರು.
ದೇವಾಲಯದಲ್ಲಿ ನೂತವಾಗಿ ಪ್ರತಿಷ್ಠಾಪಿಸಲಾಗಿರುವ ಕಳಸದ ಅಭಿಷೇಕಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷರಾದ ಟಿ.ಬಿ. ಶೇಖರ್, ಉಪಾಧ್ಯಕ್ಷ ಎಸ್.ಜಿ. ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ದೇವಸ್ಥಾನ ಸಮಿತಿಯ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ವೀರಶೈವ-ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‌ಪಟೇಲ್, ಶಿವಕುಮಾರ್, ಕೊಪ್ಪಲ್ ನಾಗರಾಜು, ರವಿಶಂಕರ್, ಎನ್. ರುದ್ರಪ್ಪ, ಕೆ.ಎಸ್. ನಾಗರಾಜು, ಯೋಗೀಶ್, ನಟರಾಜು, ಮಲ್ಲೇಶಯ್ಯ, ಕೆ.ಎಸ್. ವಿಶ್ವನಾಥ್, ನಾಗರಾಜು ಸೇರಿದಂತೆ ವೀರಶೈವ ಸಮಾಜದ ಎಲ್ಲಾ ನಿರ್ದೇಶಕರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.