ಗುಬ್ಬಿ: ಬಿಜೆಪಿ ಸರ್ಕಾರದಿಂದ ಅಗತ್ಯ ಯೋಜನೆಗಳನ್ನು ಪ್ರತಿ ಗ್ರಾಮ ಪಂಚಾಯಿತಿಗೆ ತಲುಪಿಸಲು ಬದ್ಧತೆ ಬೆಳೆಸಿಕೊಂಡು ದುಡಿಯಲು ಈಗಾಗಲೇ ಬಿಜೆಪಿ ಪಕ್ಷ ಕಲಿಸಿದೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಧಾನ ಪರಿಷತ್ ಚುನಾವಣಾ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ನಿಟ್ಟೂರು ಹೋಬಳಿ ಮುದ್ದುಪುರ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ.ಮಾತನಾಡಿದ ಅವರು ಸರ್ಕಾರದ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಗ್ರಾಮಗಳಿಗೆ ತಲುಪಿಸುವ ನಿಟ್ಟಿನಲ್ಲಿ ಈ ಚುನಾವಣೆ ಸೂಕ್ತ ಮಾರ್ಗವಾಗಿದೆ. ಇದೇ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಗುಬ್ಬಿ ಕ್ಷೇತ್ರದಲ್ಲೂ ಎಲ್ಲಾ ಮುಖಂಡರು ಒಗ್ಗೂಡಿ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರು ಮತ್ತು ಮೂರು ಮಂದಿ ಶಾಸಕರು ಇರುವ ನಮ್ಮ ಪಕ್ಷದಲ್ಲಿ ಕಾರ್ಯಕರ್ತರ ತಂಡ ಶ್ರಮದ ಫಲ ಈ ಚುನಾವಣೆ ವಿಜಯ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿ ತ್ರಿಕೋನ ಸ್ಪರ್ಧೆ ಕಂಡು ಬಂದರೂ ಬಿಜೆಪಿಗೆ ಸೂಕ್ತ ವಾತಾವರಣ ಕಾಣುತ್ತಿದೆ. ನನ್ನ ಬಗ್ಗೆ ಅಪಪ್ರಚಾರ ಅವಶ್ಯವಿಲ್ಲ. ನಾನು ಕೂಡಾ ಕೊರಟಗೆರೆ ತಾಲ್ಲೂಕಿನ ಮೂಲದವನು. ಉದ್ಯೋಗ ಹಿನ್ನಲೆ ಬೆಂಗಳೂರು ದಾಸರಹಳ್ಳಿ ನೆಲೆಸಿ ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಂಡೆ. ಬಿಜೆಪಿ ಪಕ್ಷ ಕೂಡಾ ಸಾಮಾನ್ಯ ಕಾರ್ಯಕರ್ತನಾದ ನನ್ನ ಬೆಳೆಸಿ ಈ ಮಟ್ಟಕ್ಕೆ ತಂದಿದೆ. ಈ ರೀತಿ ಬೆಳೆದ ನನಗೆ ಗ್ರಾಮೀಣ ಭಾಗದ ಕಷ್ಟಸುಖದ ಅರಿವಿದೆ. ಆ ಕಾರಣ ವಿಧಾನ ಪರಿಷತ್ ಚುನಾವಣೆ ಸ್ಪರ್ಧಿಸಿದ್ದೇನೆ. ಎಲ್ಲಾ ಚುನಾಯಿತ ಸ್ಥಳೀಯ ಜನಪ್ರತಿನಿಧಿಗಳ ಆಶೀರ್ವಾದ ಕೇಳುತ್ತಿದ್ದೇನೆ ಎಂದರು.
ಹಲವು ದಶಕಗಳಿಂದ ಈ ಕ್ಷೇತ್ರ ಬಿಜೆಪಿಗೆ ಹತ್ತಿರವಾಗಿಲ್ಲ. ಈ ಬಾರಿ ಕ್ಷೇತ್ರದ ಮತದಾರರ ಒಲವು ಬಿಜೆಪಿ ಪರ ಇದೆ. ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಎಲ್ಲಡೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಈ ಜತೆಗೆ ಮುಂದಿನ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಆಗಲಿದೆ. ಅದೇ ನಿಟ್ಟಿನಲ್ಲಿ ಪಕ್ಷದ ನಂಬಿಕೆ ಉಳಿಸುವ ಜತೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದ ಅವರು ಜಿಲ್ಲೆಯಲ್ಲೇ ವಾಸ್ತವ್ಯ ಹೂಡುವ ಜತೆಗೆ ಚುನಾವಣಾ ನಂತರದಲ್ಲೂ ಇಲ್ಲೇ ಜನ ಸಾಮಾನ್ಯರಿಗೆ ಸಿಗಲಿದ್ದೇನೆ ಎಂದು ಭರವಸೆ ನೀಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ದಾಸರಹಳ್ಳಿ ಕ್ಷೇತ್ರ ಅಭಿವೃದ್ಧಿ ಇಂದಿಗೂ ಲೋಕೇಶ್ ಗೌಡ ಅವರ ಕೆಲಸಕ್ಕೆ ಸಾಕ್ಷಿಯಾಗಲಿದೆ. ನಮ್ಮಲ್ಲಿ ಎಲ್ಲಾ ಮುಖಂಡರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಬಿಜೆಪಿ ಗೆಲುವು ಸಾಧಿಸಲು ಶ್ರಮಿಸುತ್ತೇವೆ ಎಂದು ಹೇಳಿ ಒಗ್ಗಟ್ಟು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಪಿ.ಬಿ.ಚಂದ್ರಶೇಖರಬಾಬು, ಎಸ್.ಡಿ.ದಿಲೀಪ್ ಕುಮಾರ್, ಎಸ್.ವಿಜಯಕುಮಾರ್, ಎಚ್.ಟಿ.ಭೈರಪ್ಪ, ಯತೀಶ್ ಕುಮಾರ್, ಅ. ನ.ಲಿಂಗಪ್ಪ, ಜಿ.ಎನ್.ಅಣ್ಣಪ್ಪಸ್ವಾಮಿ, ಭೀಮಶೆಟ್ಟಿ, ಜಿ.ಸಿ.ಶಿವಕುಮಾರ್ ಇತರರು ಇದ್ದರು.