ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ನೀಡುವ ಪಕ್ಷ : ಶಾಸಕ ಜ್ಯೋತಿಗಣೇಶ್
ತುಮಕೂರು ನಗರ ಮಂಡಲ ಎಸ್ ಸಿ ಮೋರ್ಚಾ ಕಾರ್ಯಕಾರಿಣಿ ಸಭೆ
ತುಮಕೂರು: ಜನತಾದಳ ಖಾಸಗಿ ಪಕ್ಷ ಅಲ್ಲಿ ದೇವೇಗೌಡರನ್ನು ಹೊಗಳಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಇದೆ, ಆದರೆ ಬಿಜೆಪಿ ಸಾಮಾನ್ಯನಿಗೆ ಅಧಿಕಾರ ನೀಡುವ ಪಕ್ಷ ಎಂದು ಶಾಸಕ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ಭಾರತೀಯ ಜನತಾ ಪಾರ್ಟಿ ತುಮಕೂರು ನಗರ ಮಂಡಲ ಎಸ್ ಸಿ ಮೋರ್ಚಾ ವತಿಯಿಂದ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. 1980ರಲ್ಲಿ ಪ್ರಾರಂಭ ಬಿಜೆಪಿ ಇಂದು 320 ಸ್ಥಾನಗಳನ್ನು ಗೆಲ್ಲುವವರೆಗೆ ಶ್ರಮಿಸಿದ್ದೇವೆ ಎಂದರು.
ರಾಷ್ಟ್ರೀಯವಾದಿ ಪಕ್ಷ ಎಂದರೆ ಅದು ಬಿಜೆಪಿ, ಹೊಂದಾಣಿಕೆ ಮಾಡಿಕೊಂಡಿದ್ದರೆ ಪಕ್ಷ ಯಾವಾಗಲೋ ಅಧಿಕಾರಕ್ಕೆ ಬರುತ್ತಿತ್ತು, ಆದರೆ ರಾಷ್ಟ್ರೀಯವಾದಕ್ಕೆ ಪ್ರಾಮುಖ್ಯತೆ ನೀಡಿದ್ದರಿಂದ ಬೇರೆ ಪಕ್ಷಗಳೊಂದಿಗೆ ಹೋಗಲಿಲ್ಲ, ಇಂದು ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಭಧ್ರತೆ ಇದ್ದರೆ ದೇಶದಲ್ಲಿ ಸುಭದ್ರತೆ ನೆಲೆಸಿದೆ ಎಂದರು.
ಸರ್ವರಿಗೂ ಸಮಪಾಲು ಸಮಬಾಳು ಎನ್ನುವವರು ಜನರಿಗೆ ಏನು ನೀಡಿದ್ದಾರೆ, ಬಿಜೆಪಿ ಇಂದು ದಲಿತರಿಗೆ ಅಧಿಕಾರ ನೀಡಿದೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಸ್ಕಾರ ನೀಡಿ ಅಧಿಕಾರ ನೀಡಲಾಗುತ್ತಿದೆ, ಪರಿಶಿಷ್ಟರ ಅಭಿವೃದ್ಧಿ ಪ್ರಾಮುಖ್ಯತೆ ನೀಡಿರುವುದು ಬಿಜೆಪಿ ಮಾತ್ರ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿತು, ಆದರೆ ಅಂಬೇಡ್ಕರ್ ಆಶಯದಂತೆ ತಳ ಮಟ್ಟದವರಿಗೆ ಅಧಿಕಾರ ನೀಡಿದ್ದು ಬಿಜೆಪಿ ಮಾತ್ರ ಎಂದರು.
ಪರಿಶಿಷ್ಟರಿಗೆ ಬಿಜೆಪಿ ಮೋಸ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ ಆದರೆ ಶೋಷಿತ, ತಳವರ್ಗದ ಜನರ ಅಭ್ಯುದಯಕ್ಕೆ ಕೈಗೊಂಡಿರುವ ಕ್ರಮಗಳನ್ನು ಬೇರೆ ಯಾವ ಪಕ್ಷವು ಕೈಗೊಂಡಿಲ್ಲ, ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದ ಅವರು, ದೇಶಕ್ಕೆ ಇಂದು ಬಿಜೆಪಿ ಅನಿವಾರ್ಯ ಎಂದು ಹೇಳಿದರು.
ದೇಶದಲ್ಲಿದ್ದ ಆಂತರಿಕ ವಿಚಾರಗಳನ್ನು ಮೆಟ್ಟಿ ದೇಶದವನ್ನು ಸುಭದ್ರವಾಗಿ ಕಟ್ಟಲಾಗುತ್ತಿದೆ, ಉಚಿತವಾಗಿ ನೀಡಲಾಗುವುದು ಕ್ಯಾನ್ಸರ್ ಇದ್ದಂತೆ, ಉಚಿತವಾಗಿ ನೀಡುತ್ಗ ಹೋದರೆ ಹಣ ಎಲ್ಲಿಂದ ತರಬೇಕು, ಕಾಂಗ್ರೆಸ್ ಮಾಡಿದ ಅನಾಹುತಗಳಿಂದ ಇಂದು ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ ಎಂದರು.
ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಹುದ್ದೆಗಾಗಿ ಪಕ್ಷಕ್ಕೆ ಸೇರ್ಪಡೆಯಾಗದೇ, ಸೇವೆಗಾಗಿ ಪಕ್ಷಕ್ಕೆ ಸೇರ್ಪಡೆಯಾಗಬೇಕು, ಪಕ್ಷ ಸೇರಿದ ತಕ್ಷಣ ಅಧಿಕಾರ ಬೇಕು ಎನ್ನುವುದನ್ನು ಬದಿಗಿಟ್ಟು ಪಕ್ಷದ ಕಾಯಕವನ್ನು ಮಾಡಬೇಕು, ಪಕ್ಷ ಅವರ ಸೇವೆಯನ್ನು ಗುರುತಿಸಿ ಅಧಿಕಾರ ನೀಡುವ ಕೆಲಸವನ್ನು ಮಾಡುತ್ತದೆ ಎಂದರು.
ಕೊರೋನಾದಿಂದಾಗಿ ಸಾಲಸೌಲಭ್ಯಗಳಲ್ಲಿ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆ, ಶಾಸಕರು, ಸಚವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು ಹಾಗೆಯೇ ಸಾಲಸೌಲಭ್ಯದ ಮೊತ್ತವನ್ನು ಹೆಚ್ಚಿಸಲು ಸಹಕಾರ ನೀಡುವ ಮೂಲಕ ದಲಿತರ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದ ಅವರು ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸಬೇಕು ಎಂದು ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಎಸ್ಸಿ ಮೋರ್ಚಾ ಕಾರ್ಯಕರ್ತರು ಶ್ರಮವಹಿಸಿಬೇಕು, ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ಪಕ್ಷದ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ, ಬಿಜೆಪಿ ದಲಿತ ವಿರೋಧಿ ಎನ್ನುವ ಭಾವನೆಯಿಂದ ದಲಿತರು ಹೊರಬರಬೇಕಿದೆ, ದಲಿತರಿಗೆ ಅಧಿಕಾರ, ಸ್ಥಾನಮಾನ ನೀಡುವ ಬದ್ಧತೆ ಇರುವುದು ಬಿಜೆಪಿಗೆ ಮಾತ್ರ, ಯಾವುದೇ ಹಿನ್ನೆಲೆಯಿರದ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ, ಅಧಿಕಾರ ನೀಡುವ ಕೆಲಸವನ್ನು ಪ್ರಾಮಾಣಿಕ ಕೆಲಸವನ್ನಿ ಬಿಜೆಪಿ ಮಾಡುತ್ತಿದ್ದು, ಅಧಿಕಾರಕ್ಕೆ ಆಸೆ ಪಡೆದೆ ಪಕ್ಷದ ಸೇವೆಯನ್ನು ಮಾಡುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಎಸ್ಸಿ ಮೋರ್ಚಾ ಕಾರ್ಯದರ್ಶಿ ಓಂಕಾರ್ ಅವರು, ಇಂದು ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯವನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದು, ಸೌಲಭ್ಯವನ್ನು ಪಡೆದುಕೊಳ್ಳದೇ ಇರುವವರಿಗೆ ಸೌಲಭ್ಯ ದೊರಕಿಸಿಕೊಡಲು ಎಸ್ಸಿ ಮೋರ್ಚಾ ಶ್ರಮಿಸಬೇಕಿದೆ ಎಂದರು.
ಪ್ರಧಾನಿ ಮೋದಿ ಅವರು ರದ್ದು ಮಾಡಿದ ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ಕಾಯ್ದೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದ ದಲಿತದ ಮುಖಂಡರು ಇಂದು ಜನಪ್ರತಿನಿಧಿಗಳಾಗಿದ್ದಾರೆ, ಭಾರತೀಯ ಜನತಾ ಪಾರ್ಟಿಯನ್ನು ಇಂದು ಅಸಂಖ್ಯಾತ ದಲಿತರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಶೋಷಿತ ಸಮುದಾಯದ ವ್ಯಕ್ತಿಯನ್ನು ಗುರುತಿಸಿ ಅಧಿಕಾರ ದೊರಕಿಸುವ ಕೆಲಸವನ್ನು ಭಾಜಪ ಮಾಡುತ್ತಿದೆ, ಕೋಟಿಗಟ್ಟಲೆ ಹಣವಿದ್ದವರು ಮಾತ್ರ ವಿಧಾನ ಪರಿಷತ್ ಸದಸ್ಯರಾಗಬಹುದು ಎನ್ನುವ ಕಾಲದಲ್ಲಿ ಶಾಂತರಾಮ ಸಿದ್ಧಿ ಅಂತವರನ್ನು ಪರಿಷತ್ ಗೆ ಕಳುಹಿಸಿದ ಹೆಮ್ಮೆ ಬಿಜೆಪಿಯದ್ದು ಎಂದರು.
ಕಾರ್ಯಕ್ರಮದಲ್ಲಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮಾಜಿ ಶಾಸಕ ಗಂಗಹನುಮಯ್ಯ, ತಾ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಮಂಜುನಾಥ್, ಟೂಡಾ ಸದಸ್ಯ ಹನುಮಂತಪ್ಪ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಓಂಕಾರ್, ಮಾರುತಿ ಗಂಗಹನಮಯ್ಯ, ಡಾ.ಲಕ್ಷ್ಮೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.