ಬಡಾಯಿ ಕೊಚ್ಚಿಕೊಂಡರೆ ನಾಯಕನಾಗೋಲ್ಲ ಜಯಚಂದ್ರ ವಿರುದ್ಧ ಸಚಿವ ಮಾಧುಸ್ವಾಮಿ ವಾಗ್ದಾಳಿ
ಚಿಕ್ಕನಾಯಕನಹಳ್ಳಿ : ಯಾರಿಗೋ ಹೆದರಿ ನಾವುಗಳು ರಾಜಕಾರಣ ಮಾಡುತ್ತಿಲ್ಲ, ಬಾಯಲ್ಲಿ ಬಡಾಯಿ ಕೊಚ್ಚಿಕೊಂಡರೆ ನಾಯಕನಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಟಾಂಗ್ ನೀಡಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಿನಿ ವಿಧಾನಸೌಧಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗ ಜ್ಞಾನೋದಯವಾಗಿದೆ. ನನ್ನ ಮಾತಿಗೆ ಹೆದರಿ ಮದಲೂರು ಕೆರೆಗೆ ನೀರು ಹರಿಸಿದ್ದಾರೆ. ಎಂದು ಹೇಳಿಕೊಂಡರೆ ಕೇಳುವ ಜನರೇನು ಮೂರ್ಖರೇ..? ವಿವೇಚನೆ ಮಾಡಿ ಮಾತನಾಡುವಷ್ಟು ಚಿಂತನೆ ಇವನಿಗೆ ಇಲ್ಲ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
ಮಾಧ್ಯಮದವರು ಅವರು ಹೇಳಿದ್ದನ್ನೇಲ್ಲ ಬರೆದು ಬಿಡುತ್ತಾರೆ. ಬ್ರಹ್ಮ ನಮ್ಮನ್ನು ಸೃಷ್ಟಿ ಮಾಡಿದರೆ, ಮಾಧ್ಯಮದವರು ಬ್ರಹ್ಮನನ್ನೇ ಸೃಷ್ಟಿ ಮಾಡುತ್ತಾರೆ ಎಂದು ಪತ್ರಿಕೆಯವರನ್ನು ತರಾಟೆಗೆ ತೆಗೆದುಕೊಂಡರು.
ಮಳೆಯಿಂದ ಶಿರಾ ಕೆರೆ ಭರ್ತಿಯಾಗಿದ್ದು, ಅದಕ್ಕೆ ಹಂಚಿಕೆ ಮಾಡಲಾದ ಉಳಿಕೆ ನೀರನ್ನು ಮದಲೂರು ಕೆರೆಗೆ ಹರಿಸಿದ್ದೇವೆ. ಕಳೆದ ಬಾರಿ ಕೂಡ ಚಿಕ್ಕನಾಯಕನಹಳ್ಳಿಗೆ ಹಂಚಿಕೆಯಾಗಿದ್ದ ನೀರನ್ನು ಹರಿಸಲಾಗಿದ್ದು ಇದು ಕೇವಲ ತಾತ್ಕಾಲಿಕವಾದ ನಿರ್ಣಯವಾಗಿದೆ. ಹೇಮಾವತಿ ಕುಡಿಯುವ ನೀರಿನ ಯೋಜನೆ ತಯಾರಿಸುವಾಗ ಮದಲೂರು ಕೆರೆಗೆ ನೀರನ್ನು ಹಂಚಿಕೆ ಮಾಡಿಲ್ಲ. ಆದರೆ ಡಿಪಿಆರ್ ತಯಾರಿಸುವಾಗ ಮದಲೂರು ಕೆರೆಯನ್ನು ಸೇರಿಸಿದ್ದಾರೆ. ಶಿರಾದಿಂದ ನೇರವಾಗಿ ಮದಲೂರು ಕೆರೆಗೆ ನೀರನ್ನು ಹರಿಸುತ್ತಿದ್ದಾರೆ. ಮಧ್ಯೆ ಬರುವ 11 ಕೆರೆಗಳ ವ್ಯಾಪ್ತಿಗೆ ಬರುವ ಜನರು ಏನು ಪಾಪ ಮಾಡಿದ್ದಾರೆ. 0.9 ಟಿಎಂಸಿ ನೀರಿನಲ್ಲಿ ಎಲ್ಲಾ ಕೆರೆಗಳನ್ನು ತುಂಬಿಸುವುದು ಅಸಾಧ್ಯ ಎಂದರು.
ಡಿಸೆಂಬರ್ ಅಥಾವ ಜನವರಿಯಲ್ಲಿ ಜಿಲ್ಲಾ ಪಂಚಾಯತ್ ತಾಲ್ಲೂಕು ಚುನಾವಣೆಗಳು ನಡೆಯುವ ಸಂಭವವಿದೆ. ಮೀಸಲಾತಿ ಪ್ರಟ್ಟಿ ತಯಾರಿಸುವ ರಾಜ್ಯ ಚುನಾವಣಾ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಐಎಎಸ್ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಮೀಸಲಾತಿ ತಯಾರಿಸುವ ಪ್ರತ್ಯೇಕ ಸಮಿತಿಯನ್ನು ರಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಉಪ ಚುನಾವಣೆಗಳ ಬಳಿಕ ಈ ಸಮಿತಿಯು ಮೀಸಲಾತಿಯ ಕರಡು ಪ್ರತಿಗಳನ್ನು ಸಿದ್ದ ಪಡಿಸಲಿದ್ದಾರೆ ಎಂದರು.
14 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಗೊಳ್ಳಲಿದ್ದು ರಾಜ್ಯದಲ್ಲೇ ಪ್ರಥಮವಾಗಿದೆ. ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು, ಶಾಸಕರ ಕಚೇರಿ, ಮತ ಏಣಿಕೆ ಕೇಂದ್ರ, ವಾಹನ ನಿಲುಗಡೆ, ಹೋಟೆಲ್, ಸಭಾಂಗಣ, ಹಾಗು ಇತರ ಸೌಲಭ್ಯಗಳು ಒಂದೇ ಜಾಗದಲ್ಲಿ ಸಿಗಲಿದೆ. ಈ ವೇಳೆ ತಹಸೀಲ್ದಾರ್ ತೇಜಸ್ವಿನಿ, ಮಾಜಿ ತಾಪಂ ಸದಸ್ಯ ನಿರಂಜನ ಮೂರ್ತಿ, ಕೇಶವಮೂರ್ತಿ, ಎಇಇ ಚಂದ್ರಶೇಖರ್, ಗುತ್ತಿಗೆದಾರ ರಘುಪತಿ, ಹಾಗು ಇತರರಿದ್ದರು.