ಕೊರಟಗೆರೆ

ಪರಿಶಿಷ್ಟ ಪಂಗಡಗಳ ಅಭಿವೃದ್ದಿ ಕಾಮಗಾರಿಗಳ ನಿರ್ಲಕ್ಷ್ಯ: ಮುಖಂಡರ ಆರೋಪ

ಕೊರಟಗೆರೆ: ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀಮ್ ಉನ್ನೀಸಾ ಪರಿಶಿಷ್ಟ ಪಂಗಡಗಳ ಜನಾಂಗದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯ ದೋರಣೆ ಮತ್ತು ಸರ್ಕಾರದಿಂದ ಮಂಜೂರಾಗಿರುವ ವಾಲ್ಮೀಕಿ ಭವನವನ್ನು ಹಲವು ವರ್ಷಗಳಿಂದ ನಿರ್ಮಿಸದೇ ಕರ್ತವ್ಯ ಲೋಪ ಮಾಡುತ್ತಿರುವುದರ ವಿರುದ್ದ ಇಂದು ತಾಲ್ಲೂಕು ವಾಲ್ಮೀಕಿ ಸಮಾಜವು ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದೆ ಎಂದು ಪ.ಪಂ ಸದಸ್ಯ ಹಾಗೂ ಸಮುದಾಯದ ಮುಖಂಡ ಕೆ.ಆರ್ ಓಬಳರಾಜು ತಿಳಿಸಿದರು.
ತಾಲ್ಲುಕು ಕಛೇರಿಯಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಮಾತನಾಡಿ, ಕೊರಟಗೆರೆ ಪಟ್ಟಣಕ್ಕೆ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಸುಮಾರು 1.25 ಕೋಟಿ ರೂಗಳು ಮಂಜೂರಾಗಿ ಭೂಮಿ ಗುರುತಿಸಿ ಹಲವು ವರ್ಷಗಳಾಗಿವೆ. ಈ ಬಗ್ಗೆ ಶಾಸಕರು ಹಲವು ಭಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಆದರೆ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಈ ಬಗ್ಗೆ ಶ್ರಮ ವಹಿಸದೇ ಇಲಾಖೆ ಕೆಲಸಗಳನ್ನು ಸರಿಯಾಗಿ ನಿರ್ವಹಿಸದೇ ಕಾಲ ತಳ್ಳುತ್ತಿದ್ದು, ಅಧಿಕಾರ ಲೋಪವ್ಯಸಗಿದ್ದಾರೆ. ಕಳೆದ ವರ್ಷ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಇದೇ ಕಾರಣದಿಂದಲೇ ಭಹಿಷ್ಕರಿಸಲಾಗಿತ್ತು. ಆಗಲೂ ಸಹ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ತಾಲ್ಲುಕು ಮಟ್ಟದ ಪ.ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲು ಸಹ ಸಮಾಜ ಕಲ್ಯಾಣಾಧಿಕಾರಿಗಳು ವಾಲ್ಮೀಕಿ ಭವನವನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸುವ ಆಸ್ವಾಸನೆ ನೀಡಿದ್ದರು. ಆದರೆ ಅಧಿಕಾರಿಗಳ ವರ್ತನೆ ನೋಡಿದರೆ ಸಮಾಜದ ಬಗ್ಗೆ ಅವರಿಗಿರುವ ನಿರ್ಲಕ್ಷ್ಯ ಭಾವನೆ ತೋರಿಸುತ್ತದೆ. ಇದು ಹೀಗೆ ಮುಂದುವರಿದರೆ ಸಮಾಜದ ಮುಖಂಡರೆಲ್ಲರು ಧರಣಿ ಸತ್ಯಗ್ರಹವನ್ನು ನಡೆಸಬೇಕಾಗುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಮುದಾಯದ ಮತ್ತೊಬ್ಬ ಮುಖಂಡ ವಿಜಯಕುಮಾರ್ ಮಾತನಾಡಿ, ತಾಲ್ಲೂಕಿಗೆ ತಲಾ 50 ಲಕ್ಷ ರೂಗಳಲ್ಲಿ 4 ವಾಲ್ಮೀಕಿ ಭವನಗಳು ಹೋಬಳಿ ಮಟ್ಟದಲ್ಲಿ ಮತ್ತು 9 ವಾಲ್ಮೀಕಿ ಭವನಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಜೂರಾಗಿ ಹಲವು ವರ್ಷಗಳಾಗಿವೆ. ಸಮಾಜದ ಮುಖಂಡರುಗಳು ಮತ್ತು ಜನಪ್ರತಿನಿದಿಗಳು ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಅಧಿಕಾರಿಗಳ ಗಮನಕ್ಕೆ ತಂದರು ಸಮಾಜ ಕಲ್ಯಾಣಾಧಿಕಾರಿಗಳು ಈ ಬಗ್ಗೆ ದಾಖಲೆಗಳನ್ನು ಇಲಾಖೆಗೆ ಒದಗಿಸದೇ ಕಾಮಗಾರಿಗಳು ನೆನೆಗುದ್ದಿಗೆ ಬಿದ್ದಿವೆ. ಸರ್ಕಾರವು ತುಳಿತಕ್ಕೆ ಒಳಗಾದ ವರ್ಗಗಳಿಗೆ ನೀಡುತ್ತಿರುವ ಸೌಲಭ್ಯ ಮತ್ತು ಸೌಲತ್ತುಗಳನ್ನು ಆ ವರ್ಗಗಳಿಗೆ ತಲುಪಿಸುವಲ್ಲಿ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಈ ಬಗ್ಗೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಗಮನವಹಿಸಿ, ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ತಿಳಿಸಿಸಿದ ಅವರು ಅಲ್ಲಿಯವರೆಗು ಸರ್ಕಾರ ಮಾಡುವ ವಾಲ್ಮೀಕಿ ಜಯಂತಿಗೆ ಭಾಗವಹಿಸದೇ ನಮ್ಮ ಮಟ್ಟದಲ್ಲಿ ಜಯಂತಿಯನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಪ.ಪಂ ಸದಸ್ಯರುಗಳಾದ ಪುಟ್ಟನರಸಯ್ಯ, ಲಕ್ಷ್ಮೀನಾರಾಯಣ್, ನಟರಾಜು, ಮಾಜಿ ಉಪಾಧ್ಯಕ್ಷ ಕೆ.ವಿ ಮಂಜುನಾಥ್, ಮುಖಂಡರುಗಳಾದ ರಮೇಶ್, ಚಿಕ್ಕರಂಗಯ್ಯ ಕಾರ್‌ಮಹೇಶ್, ಲಕ್ಷ್ಮೀಶ ಕೆ.ಎಲ್, ಗೋಪಿನಾಥ್, ನಂಜಪ್ಪ, ಹೆಚ್.ರಮೇಶ್, ನಾಗರಾಜು, ಕೇಶವಮೂರ್ತಿ, ಮಂಜುನಾಥ್,ಕೆಂಪರಾಜು, ರಂಗನಾಥ್, ಶ್ರೀನಿವಾಸ್ ಸೇರಿದಂತೆ ಇತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker