ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆ

ಗುಬ್ಬಿ:- ಹೆಂಡತಿ ಮತ್ತು ಕುಟುಂಬದವರಿಗೆ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಶನಿವಾರ ಮನೆಯಿಂದ ಹೊರ ಹೋಗಿದ್ದ ವ್ಯಕ್ತಿಯೊಬ್ಬ ಸೋಮವಾರ ಬೆಳಗ್ಗೆ ಜಿ.ಹೊಸಹಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಂಡುಬಂದಿದೆ.
ತಾಲ್ಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ವಾಸಿಯಾದ ಪಾಂಡುರಂಗಯ್ಯ ಎಂಬ ಸುಮಾರು 38 ವರ್ಷದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ.
ಜಿ.ಹೊಸಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಪಾಂಡುರಂಗ ಎಂಬುವರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ಕೈ ಸಾಲ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎಂದು ಹೆಂಡತಿ ಇಂದ್ರಮ್ಮ ದೂರಿನಲ್ಲಿ ತಿಳಿಸಿದ್ದು, ಮದುವೆಯಾಗಿ 13 ವರ್ಷಗಳು ಕಳೆದಿದ್ದು ಇವರಿಗೆ ಮಕ್ಕಳಿರಲಿಲ್ಲ ಎಂಬ ಬಗ್ಗೆ ವರದಿಯಾಗಿದ್ದು ಹೆಂಡತಿ ಮತ್ತು ಕುಟುಂಬಸ್ಥರನ್ನು ಬಿಟ್ಟು ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಗಿದ್ದು ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಕೆಲಸಗಳ ನಿಮಿತ್ತ ತೋಟಗಳಿಗೆ ಹೋಗುತ್ತಿದ್ದ ರೈತರಿಗೆ ಕೆರೆಯ ಬಳಿ ದಂಡೆಯ ನೀರಿನಲ್ಲಿ ತೇಲುತ್ತಿದ್ದ ಶವವನ್ನು ಕಂಡು ಗಾಬರಿಯಾಗಿ ಗುಬ್ಬಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸಿದ ಗುಬ್ಬಿ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ನೆರವಿನಿಂದ ಶವವನ್ನು ಹೊರ ತೆಗೆಯಲಾಗಿದ್ದು ಆಗ ಅದೇ ಗ್ರಾಮದ ವಾಸಿ ನೀರಿನಲ್ಲಿ ತೇಲುತ್ತಿದ್ದ ವ್ಯಕ್ತಿ ಎಂದು ತಿಳಿಯಲಾಗಿದ್ದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.