ಎರಡನೇ ಅಕ್ರಮ ಸಂಸಾರದ ಕತೆಗೆ 6 ವರ್ಷದ ಮಗು ಬಲಿ : ಚಿತಾವಣೆ ಮಾಡಿ ಮೊದಲ ಪತ್ನಿ ಜೊತೆ ಸಿಕ್ಕಿಬಿದ್ದ ಪ್ರಿಯಕರ.!!
ಗುಬ್ಬಿ : ಕರುಳು ಬಳ್ಳಿಗೆ ವಿಷ ಉಣಿಸಿ ಕೊಂದು ತಾನು ವಿಷ ಕುಡಿದ ತಾಯಿ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪತ್ನಿಯ ಮಾಸ್ಟರ್ ಪ್ಲಾನ್ ಗೆ ಒಪ್ಪಿ ಸಂಚು ರೂಪಿಸಿ ಎರಡನೇ ಅಕ್ರಮ ಸಂಬಂಧ ಮುರಿದುಕೊಳ್ಳಲು ತಾಯಿ ಮತ್ತು ಪುಟ್ಟ ಮಗುವಿಗೆ ವಿಷ ಉಣಿಸಿ ಪ್ರಿಯಕರನೊಬ್ಬ ಕೊಲೆಗೆ ಮುಂದಾಗಿರುವ ರೋಚಕ ಘಟನೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ತ್ಯಾಗಟೂರು ಗೇಟ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಂದ್ರಮ್ಮನ ಜೊತೆಗಿನ ಯತೀಶನ ಎರಡನೇ ಅಕ್ರಮ ಸಂಸಾರದ ಕತೆಗೆ ಏನು ಅರಿಯದ ದೀಕ್ಷಿತ ಎಂಬ 6 ವರ್ಷದ ಪುಟ್ಟ ಬಾಲಕಿ ಬಲಿಯಾಗಿರುವ ಜೊತೆಗೆ ಪ್ರಿಯಕರನ ನಂಬಿ ಬಂದ ಮಹಿಳೆಗೆ ವಿಷ ಪ್ರಾಶನ ಮಾಡಿ ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ಕಳೆದೆರಡು ದಿನದಿಂದ ರೋಚಕ ತಿರುವು ಪಡೆದುಕೊಂಡಿದೆ.
ಎರಡು ವರ್ಷಗಳಿಂದ ಮದುವೆಯಾಗಿ ಎರಡನೇ ಪತ್ನಿ ಇಂದ್ರಮ್ಮನ ಜೊತೆ ಬೊಮ್ಮರಸನಹಳ್ಳಿಯ ಯತೀಶ್ ವಾಸವಾಗಿದ್ದು ಈ ಬಗ್ಗೆ ಮೊದಲ ಹೆಂಡತಿಗೂ ಗೊತ್ತಿದ್ದು, ಎರಡನೇ ಸಂಬಂಧ ತ್ಯಜಿಸಿ ಬರುವಂತೆ ಮೊದಲ ಹೆಂಡತಿ ತಿಳಿಸಿ ಅವರಿಬ್ಬರಿಗೂ ವಿಷ ಹಾಕಿ ಕೊಲ್ಲುವಂತೆ ಕೊಲೆಗೆ ಪ್ರೇರೆಪಣೆ ನೀಡಿದ್ದಳು ಎಂಬುದು ತಿಳಿದುಬಂದಿದ್ದು ಈ ಕಾರಣಕ್ಕೆ ಇಬ್ಬರು ಪ್ಲಾನ್ ಮಾಡಿ ಇಂದ್ರಮ್ಮ ಮತ್ತು ದೀಕ್ಷಿತ ಎಂಬ ಮಗುವಿಗೆ ವಿಷ ಹಾಕಿ ತಾನು ವಿಷ ಕುಡಿದಂತೆ ನಟನೆ ಮಾಡಿ ಯತೀಶ್ ಮಗುವಿನ ಸಾವಿಗೆ ಕಾರಣನಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಅತ್ತೆ ನರಸಮ್ಮ ತನ್ನ ಸೊಸೆಯ ಮೇಲೆ ನೀಡಿದ ದೂರಿನ ಮೇರೆಗೆ ಗುಬ್ಬಿ ಠಾಣೆಯಲ್ಲಿ ಕೊಲೆ ಆರೋಪದ ಪ್ರಕರಣ ದಾಖಲಾಗಿದ್ದು ಪ್ರಕರಣ ಭೇದಿಸಿದ ಪೊಲೀಸರಿಗೆ ಬೇರೆಯೇ ಮಾಹಿತಿ ಸಿಕ್ಕಿದ್ದು ಯತೀಶ ಮತ್ತು ಆತನ ಹೆಂಡತಿ ವಿಜಯ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಸತ್ಯಾಂಶ ಹೊರ ಬಂದಿದೆ ಎನ್ನಲಾಗಿದೆ.
ಒಟ್ಟಾರೆ ಎರಡನೇ ಸಂಬಂಧ ಕಡಿದು ಕೊಳ್ಳಲು ತಾಯಿ ಮತ್ತು ಮಗುವಿಗೆ ವಿಷವಿಟ್ಟು ಕೊಲೆಗೆ ಮುಂದಾಗಿ ಮಗುವಿನ ಸಾವಿಗೆ ಕಾರಣನಾದ ಯತೀಶ್ ಮತ್ತು ಆತನ ಹೆಂಡತಿಯನ್ನು ಪೊಲೀಸರು ಬಂದಿಸಿದ್ದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಮತ್ತೊಮ್ಮೆ ಪೊಲೀಸ್ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.