ಜಿಲ್ಲೆತುಮಕೂರುಸುದ್ದಿ

ಡಾ: ಅಂಬೇಡ್ಕರ್ ಭಾರತದ ಸಾಂಸ್ಕೃತಿಕ ನಾಯಕ : ಓಬವ್ವ ಜಯಂತಿಯಲ್ಲಿ ಪ್ರೊ. ಎಸ್. ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯ

ಛಲವಾದಿ ಸಮುದಾಯದಲ್ಲಿ ವಿಶೇಷ ಸಾಧನೆಗೈದ ೧೦ ಮಂದಿಗೆ ಗೌರವ ಸನ್ಮಾನ

ತುಮಕೂರು : ದೇಶದುದ್ದಕ್ಕೂ ಎಲ್ಲಾ ಜನ ಸಮುದಾಯದಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಸಮ ಸಮಾಜದ ನಿರ್ಮಾಣಕ್ಕೆ ಸಮತೆಯನ್ನು ಬೋಧಿಸಿದ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಎಸ್. ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ: ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕರ್ನಾಟಕ ಜನಸಂಸ್ಕೃತಿಯಲ್ಲಿ ಸಮಾನ ಭಾವ ಮೂಡಿಸಿ ವಾಸ್ತವತೆಯನ್ನು ಸಾರಿದ ಶರಣ ಸಾಹಿತ್ಯದ ರೂವಾರಿ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅಂತೆಯೇ ದೇಶದಾದ್ಯಂತ ತಳಸಮುದಾಯಗಳನ್ನು ಸಮತೆಯೆಡೆಗೆ ಸಾಗಲು ಬೆಳಕು ತೋರಿದ ಡಾ: ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಅವಶ್ಯಕತೆಯಿದೆ ಎಂದರು.
ಇತಿಹಾಸದಲ್ಲಿ ತಳ ಸಮುದಾಯದ ಓಬವ್ವ ಒಬ್ಬ ಕಾವಲುಗಾರನ ಪತ್ನಿಯಾಗಿ ಸ್ವಾಮಿನಿಷ್ಠೆಗಾಗಿ ಹಾಗೂ ತಮ್ಮ ರಾಜ್ಯದ ಉಳಿವಿಗಾಗಿ ಒನಕೆಯಿಂದ ಶತ್ರುಗಳನ್ನು ಸದೆ ಬಡಿದು ವೀರವನಿತೆಯಾದಳು. ಈ ಮೂಲಕ ಛಲವಾದಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಛಲವಾದಿ ಎಂಬ ಪದಕ್ಕೆ ಅರ್ಥ ತುಂಬಿ ನಿರೂಪಿಸಿದರು. ಅಂತೆಯೇ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಕೂಡ ಯಾವುದೇ ಫಲಾಪೇಕ್ಷೆಯಿಲ್ಲದೆ ಸಂವಿಧಾನ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿ ತಳ ಸಮುದಾಯದಲ್ಲಿ ಧೈರ್ಯ ತುಂಬಿದ್ದಾರೆ ಎಂದರು.
ಸ್ವಾತಂತ್ರö್ಯ ಭಾರತದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ತಳ ಸಮುದಾಯಗಳನ್ನು ಹರಿ ಜನರೆಂದು ಕರೆದರೂ ಅಂಬೇಡ್ಕರ್ ಅವರು ತಮ್ಮ ಸಮುದಾಯದವರನ್ನು ನಿಮ್ನ ಜನ ಎಂದು ಹೇಳುವ ಮೂಲಕ ಶೋಷಣೆಯ ನಿಜವಾದ ಅನುಭವವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳಾದ ಕೆಳ ಜಾತಿಯ ಜನರು ಸಂವಿಧಾನದ ಆಶಯಗಳೊಂದಿಗೆ ತಮ್ಮ ಕೀಳರಿಮೆಯನ್ನು ಬಿಟ್ಟು ಶಿಕ್ಷಣದ ಮೂಲಕ ಪ್ರಜ್ಞಾವಂತರಾಗಿ ಮುಂಚೂಣಿಗೆ ಬರಬೇಕಿದೆ ಎಂದು ಕರೆ ನೀಡಿದರು.

 

 

 

ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಅವರು, ಶತ್ರುಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿ ಸಾಹಸ ಮೆರೆದ ವೀರ ಮಹಿಳೆ ಓಬವ್ವ ಶೌರ್ಯ, ಸ್ವಾಮಿನಿಷ್ಠೆ, ದೇಶಭಕ್ತಿಯ ಪ್ರತೀಕ ಎಂದರು.
ನಾಡಿನ ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಧೀರ ಮಹಿಳೆಯೇ ಒನಕೆ ಓಬವ್ವ. ಯುದ್ದ ತಂತ್ರ ಅರಿಯದ ಒನಕೆ ಓಬವ್ವ ಕತ್ತಿ ಹಿಡಿಯದೇ ಕೈಗೆ ಸಿಕ್ಕಿದ ಒನಕೆಯಿಂದಲೇ ಶತೃಗಳನ್ನು ಮಣಿಸುವ ಮೂಲಕ ತನ್ನ ನಾಡನ್ನು ರಕ್ಷಿಸಿದ ದೇಶಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ,  ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಸಿ. ಭಾನುಪ್ರಕಾಶ್, ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ. ಪಿ.ಚಂದ್ರಪ್ಪ, ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ  ಟಿ.ಆರ್. ನಾಗೇಶ, ಒನಕೆ ಓಬವ್ವ ಮಹಿಳಾ ಬಳಗ ಅಧ್ಯಕ್ಷ ಎಂ.ಆರ್. ವಿಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಒನಕೆ ಓಬವ್ವನವರ ಭಾವಚಿತ್ರವನ್ನು ಬಿ.ಜಿ.ಎಸ್. ವೃತ್ತದಿಂದ ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರದವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

ಛಲವಾದಿ ಸಮುದಾಯದಲ್ಲಿ ವಿಶೇಷ ಸಾಧನೆಗೈದ ೧೦ ಮಂದಿಗೆ ಗೌರವ :-
ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಖ್ಯಸ್ಥೆ ಪ್ರೊ. ಎನ್. ಲಕ್ಷ್ಮೀ; ಸಂಗೀತ ಕ್ಷೇತ್ರದಲ್ಲಿ ಮಧುಗಿರಿ ವಿನಾಯಕ ನಗರದ ಎಲ್. ಲಲಿತಾಂಬ, ತುಮಕೂರು ತಾಲೂಕಿನ ಹಬ್ಬತ್ತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರತ್ನಮ್ಮ ಹೆಚ್.ಟಿ.; ಸಮಾಜಸೇವೆ ಕ್ಷೇತ್ರದಲ್ಲಿ ವೀರವನಿತೆ ಒನಕೆ ಓಬವ್ವ ಮಹಿಳಾ ಬಳಗ ಅಧ್ಯಕ್ಷೆ ವಿಜಯಲಕ್ಷ್ಮೀ ಎಂ.ಆರ್., ಮಹಾನಗರ ಪಾಲಿಕೆ ಪೌರಕಾರ್ಮಿಕರ ಲಲಿತಮ್ಮ, ತಿಪಟೂರು ತಾಲೂಕಿನ ಅಪ್ಪಾಜಯ್ಯ ಎನ್. ಹಾಗೂ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಗೌಡಗೆರೆ ವರದರಾಜು; ಜನಪದ ಕ್ಷೇತ್ರದಲ್ಲಿ ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಶೈಲಾಪುರದ ಕಹಳೆ ತಿಮ್ಮಣ್ಣ, ಶಿರಾ ತಾಲೂಕಿನ ಬೇವಿನಹಳ್ಳಿ ಬಿ.ಕೆ. ನರಸಿಂಹರಾಜು; ಪತ್ರಿಕೋದ್ಯಮ ಕ್ಷೇತ್ರದಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಗಾಂಧಿನಗರದ ಹೆಚ್.ಎಸ್. ಪರಮೇಶ್ ಅವರಿಗೆ ಗಣ್ಯರಿಂದ ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಹೆಚ್.ಎಂ. ಸೋನಾ, ನಂದನ್ ಕುಮಾರ್, ಎಲ್. ಚಿನ್ನಸ್ವಾಮಿ, ಕೆ.ಆರ್. ರಶ್ಮಿ, ಪುಷ್ಪಾಂಜಲಿ, ಎಂ. ಲಲಿತಾ, ಎಸ್.ಆರ್. ಯಶಸ್ ಹಾಗೂ ಆರ್. ನಂದನ್ ಕುಮಾರ್ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಜಿ. ಸುಜಯ್, ಸಿ.ಬಿ. ಶ್ರೀರಕ್ಷಾ, ಧನುಶ್ರೀ, ಬಿ.ಎನ್. ಮೇಘನ, ವಿ.ಎಸ್. ನವ್ಯಶ್ರೀ, ಲಿಖಿತಾ ಅವರನ್ನು ಪುರಸ್ಕರಿಸಲಾಯಿತು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker