ಮಧುಗಿರಿ : ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ರವರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಮಾರುತಿನಗರದಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲಿಗೆ ದಿಢೀರ್ ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ವಿದ್ಯಾರ್ಥಿ ನಿಲಯದಲ್ಲಿ ಹಾಜರಿದ್ದ ವಿದ್ಯಾರ್ಥಿಗಳೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಹತ್ಮಾ ಗಾಂಧೀಜಿ , ಬಾಬಾ ಸಾಹೇಬ್ ಅಂಬೇಡ್ಕರ್ ಎಪಿಜೆ ಅಬ್ದುಲ್ ಕಲಾಂ ಮುಂತಾದ ಆದರ್ಶ ಪುರುಷರ ಜೀವನ ಚರಿತ್ರೆಗಳು ನಮಗೆ ದಾರಿ ದೀಪಗಳಾಗಿದ್ದು ಅವರ ಆತ್ಮ ಚರಿತ್ರೆಗಳನ್ನು ಓದುವುದರ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವಂತೆ ಕರೆ ನೀಡಿದರು.
ಚರಿತ್ರೆ ಅರಿಯದವನು ಚರಿತ್ರೆ ಬರೆಯಲಾರ ಎನ್ನುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ಪ್ರತಿಯೊಬ್ಬರೂ ತನ್ನ ದೇಶ ನನ್ನ ಕುಟುಂಬದ ನನ್ನ ಸ್ಥಳದ ಚರಿತ್ರೆಯನ್ನು ಅರಿತರೆ ನಾನು ಮುಂದೆ ಹೇಗೆ ನಡೆಯಬೇಕು ಎನ್ನುವ ದೃಢವಾದ ಮಾರ್ಗ ಲಭಿಸುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳು ತನ್ನದೇ ಆದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಓದುವುದನ್ನು ಸಹ ಒಂದು ಹವ್ಯಾಸವನ್ನಾಗಿಸಿಕೊಂಡು ಉತ್ತಮವಾದ ಜ್ಞಾನವನ್ನು ಸಂಪಾದಿಸಿ ಭವಿಷ್ಯದಲ್ಲಿ ಉತ್ತಮ ಅಧಿಕಾರಿಗಳಾಗಿ ವೈದ್ಯರಾಗಿ ತಂತ್ರಜ್ಞರಾಗಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವ ಭಾಗ್ಯವು ನಿಮಗೆ ದೊರೆಯಲಿವೆ.
ನನ್ನ ವಿದ್ಯಾರ್ಥಿ ದೆಸೆಯಲ್ಲಿ ಪಿಯುಸಿ , ಪದವಿ ಹಾಗೂ ಎಂಬಿಎ ಪದವಿ ವ್ಯಾಸಂಗದ ವರೆಗೆ ನಾನು ಸಹ ನಿಮ್ಮಂತಯೇ ಹಾಸ್ಟೆಲ್ ನಲ್ಲಿಯೇ ಅಧ್ಯಯನ ಮಾಡಿದ್ದೇನೆ. ನಮ್ಮದು ಸಹ ಕೃಷಿ ಕುಟುಂಬವಾಗಿದ್ದು ಹಳ್ಳಿಯಲ್ಲಿ ಹುಟ್ಟಿ ರೈತ ಕುಟುಂಬದಿಂದ ಬಂದಿದ್ದೇನೆ ಜಮೀನುಗಳಲ್ಲಿನ ಕೆಲಸ ಕಾರ್ಯಗಳ ಬಗ್ಗೆ ನನಗೂ ಅನುಭವಿದೆ.ನೀವೆಲ್ಲರೂ ಪ್ರತಿದಿನ ಅರ್ಥಪೂರ್ಣವಾದ ಓದುವ ಹವ್ಯಾಸವನ್ನು ರೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಮಯದಲ್ಲಿ ವಿದ್ಯಾರ್ಥಿ ನಿಲಯದ ಮಕ್ಕಳು ತಮ್ಮ ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು. ಕಂಪ್ಯೂಟರ್ ಉತ್ತಮವಾದ ಪುಸ್ತಕಗಳು ಹೆಚ್ಚುವರಿಯಾಗಿ ಬಿಸಿನೀರಿನ ಸೋಲಾರ್ ವಾಟರ್ ಹೀಟರ್ ಅಗತ್ಯವಿದ್ದು ಪೂರೈಸಿ ಕೊಡುವಂತೆ ಸಿಇಓ ಬಳಿ ಮನವಿ ಮಾಡಿದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅತಿ ಶೀಘ್ರವಾಗಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಭರವಸೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಣ್ ಹಾಗೂ ಮಧುಸೂಧನ್ ಸೇರಿದಂತೆ ತಾಲೂಕು ಯೋಜನೆ ಅಧಿಕಾರಿಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.