ದುಷ್ಕರ್ಮಿಗಳಿಂದ ಕಲ್ಲೇಟು ನನಗೆ ಆತಂಕ ತರಿಸಿದೆ : ಡಾ.ಜಿ.ಪರಮೇಶ್ವರ್
ತುಮಕೂರು : ಯಾರೋ ದುಷ್ಕರ್ಮಿಗಳು ನನ್ನ ಮೇಲೆ ಕಲ್ಲು ಎಸೆದು ಗಾಯಗೊಳ್ಳುವಂತೆ ಮಾಡಿದ್ದಾರೆ. ಇದು ಸೇರಿದಂತೆ ಮೂರು ಬಾರಿ ನನ್ನ ಮೇಲೆ ಈ ರೀತಿಯ ಘಟನೆಗಳು ನಡೆದಿವೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನ ಸಿದ್ಧಾರ್ಥನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಲು ಹೂವಿನಲ್ಲಿ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಅದು ತುಂಬಾ ದಪ್ಪ ಕಲ್ಲು. ನನ್ನ ತಲೆಯ ಮೇಲೆ ಬಿದ್ದವೇಗವೇ ಯಾರೋ ದುಷ್ಕರ್ಮಿಗಳು ಎಸೆದಿರಬಹುದು ಎಂದು ಗೊತ್ತಾಗುತ್ತದೆ ಎಂದರು.
ಏಪ್ರಿಲ್ 28ರಂದು ಸಂಜೆ 4.30 ರ ಸುಮಾರಿಗೆ ಭೈರೇನಹಳ್ಳಿಗೆ ಪ್ರಚಾರಕ್ಕೆ ಬಂದೆ. ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನನ್ನ ಎತ್ತುಕೋಬೇಡಿ ಅಂತಾ ಹೇಳುತ್ತಿದ್ದೆ. ಅಷ್ಟರಲ್ಲಿ ಜೆಸಿಬಿಯಲ್ಲಿ ಹೂವು, ಕ್ರೇನ್ ನ ಹಾರ ಹಾಕೋಕೆ ಪ್ರಾರಂಭಿಸಿದರು. ಇದೇ ವೇಳೆ ಸಡನ್ ಆಗಿ ನನ್ನ ತಲೆಗೆ ಏನೋ ಬಿದ್ದಂತಾಯಿತು. ನೋಡಿದರೆ ಕಲ್ಲು. ಕಲ್ಲು ಬಿದ್ದ ರಭಸಕ್ಕೆ ರಕ್ತವೂ ಬರೋಕೆ ಶುರುವಾಯಿತು. ನಾನು ಕೂಗಿಕೊಂಡೆ. ಆಗ ನನ್ನ ರಕ್ತಸ್ರಾವ ಗಮನಿಸಿ ಕೆಳಗೆ ಇಳಿಸಿದರು ಎಂದು ಘಟನೆಯನ್ನು ವಿವರಿಸಿದರು.
ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಗಮ್ ಹಾಕಿದ್ದಾರೆ. ಸ್ವಲ್ಪ ನೋವಿದೆ, ವೈದ್ಯರು ತಿಳಿಸಿದರೆ ನಾಳೆಯೇ ಪ್ರಚಾರಕ್ಕೆ ಹೋಗುತ್ತೇನೆ. ಪರಮೇಶ್ವರ್ ಗೆ ಕಲ್ಲೆಸೆತ ಡ್ರಾಮ ಅನ್ನೋ ಕುಮಾರಸ್ವಾಮಿ ಹೇಳಿಕೆ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು, ನನಗೆ ಅತ್ತು ಕರೆದು ಡ್ರಾಮಾ ಮಾಡಿ ಯಾವತ್ತೂ ಅಭ್ಯಾಸ ಇಲ್ಲಾ. ಏಕೆಂದರೆ ಏಟು ತಿಂದವನು ನಾನು ಅಲ್ವಾ, ಅವರಲ್ಲಾ ಎಂದು ತಿರುಗೇಟು ನೀಡಿದರು.
ನಾನು 35 ವರ್ಷದಿಂದಲೂ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ ಅಂದುಕೊಂಡಿದ್ದೇನೆ. ನಿನ್ನೆಯ ಘಟನೆ ನನಗೆ ಆತಂಕ ತರಿಸಿದೆ. ಈ ವಿಷಯದ ಕುರಿತು ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ. ತನಿಖೆ ಮಾಡುವಂತೆ ಹೇಳಿದ್ದೇನೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ನನ್ನ ಆರೋಗ್ಯ ವಿಚಾರಿಸಿದ್ದಾರೆ. ನನಗೆ ಭದ್ರತೆ ಅವಶ್ಯಕತೆ ಇಲ್ಲ ಅಂದುಕೊಂಡಿದ್ದೆ. ಆದರೆ ಈ ಘಟನೆ ನಡೆದ ಮೇಲೆ ಭದ್ರತೆ ಬೇಕು ಅನಿಸುತ್ತಿದೆ ಎಂದು ಹೇಳಿದರು.