ತಿಪಟೂರು : ತಿಪಟೂರು ತಾಲ್ಲೂಕಿನ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ಅನಿದ್ರಿಷ್ಟಾವಧಿ ಧರಣಿಯ ನಂತರದಲ್ಲಿ ‘ನಮ್ಮ ನಡೆ ಹಳ್ಳಿ ಕಡೆ’ ಎಂಬ ನೂತನ ಕಾರ್ಯಕ್ರಮದೊಂದಿಗೆ ಗ್ರಾಮೀಣ ಭಾಗರ ರೈತರಲ್ಲಿ ಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಯೋಗೀಶ್ವರ ಸ್ವಾಮಿ ತಿಳಿಸಿದರು.
ನಗರದಲ್ಲಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ವತಿಯಿಂದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ನಮ್ಮೆಲ್ಲರ ಬದುಕಿನ ಬೆಳೆ ಕೊಬ್ಬರಿಯ ಬೆಲೆ ತೀವ್ರ ಕುಸಿತಗೊಂಡು ನಾವೆಲ್ಲರೂ ಆಘಾತಕ್ಕೆ ಒಳಗಾಗಿದ್ದೇವೆ. ಕೊಬ್ಬರಿಯ ಕನಿಷ್ಟ ಬೆಂಬಲ ಬೆಲೆ 20,000, ಪ್ರೋತ್ಸಾಹ ಧನ 5,000ಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ 33 ದಿನಗಳು ಪ್ರತಿಭಟನೆ, ಉಪವಾಸ ಮಾಡಿ ಮಾ. 24 ರಂದು ತೆಂಗು ಬೆಳೆಯುವ ರೈತರೆಲ್ಲರೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸ್ವಾಭಿಮಾನಿ ಸಮಾವೇಶ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದರೂ ಕೇಂದ್ರ ಮತ್ತು ರಾಜ್ಯದ ಆಡಳಿತಾರೂಡ ಬಿಜೆಪಿ ಸರ್ಕಾರ ದಿವ್ಯ ನಿರ್ಲಕ್ಷ ತೋರಿದೆ. ನಮ್ಮೆಲ್ಲರ ಉಳಿವಿಗಾಗಿ ‘ನಮ್ಮ ನಡೆ ಹಳ್ಳಿಯ ಕಡೆ’ ಎಂಬ ಆಶಯದೊಂದಿಗೆ ಹಳ್ಳಿಗಳ ಕಡೆಗೆ ಹೊರಟಿದ್ದು ಗ್ರಾಮೀಣ ಭಾಗದ ಜನರಿಗೆ ಚುನಾವಣೆಯ ಸಂದರ್ಭದ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ರೈತರ ಸಮಸ್ಯೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವಂತಹ ಕಾರ್ಯವನ್ನು ಮಾಡಲು ಜನರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಚುನಾವಣೆಗೆ ರೈತ ಸಂಘದ ಅಭ್ಯರ್ಥಿ ಇಲ್ಲ :
ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದಿಂದ ಚುನಾವಣೆಗೆ ಯಾರೂ ಸ್ಪರ್ಧೇ ಮಾಡಲುವುದಿಲ್ಲ. ಅಲ್ಲದೇ ಯಾವುದೇ ಪಕ್ಷಕ್ಕೂ ಬೆಂಬಲವನ್ನು ನೀಡಿಲ್ಲ. ರೈತ ಸಂಘದ ಹೆಸರಿನಲ್ಲಿ ಚುನಾವಣೆಗೆ ನಿಲ್ಲಲ್ಲು ಮುಂದಾಗಿರವ ಅಭ್ಯರ್ಥಿಯೂ ಬೇರೆ ಬಣದವರಾಗಿದ್ದು ನಮ್ಮ ಸಂಘಕ್ಕೂ ಇವರಿಗೂ ಯಾವುದೇ ಸಂಬಂಧವಾಗಲಿ ಬೆಂಬಲವಾಗಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ :
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರೊ.ಜಯನಂದಯ್ಯ, ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಯಚಂದ್ರ ಶರ್ಮಾ, ಕಾರ್ಯದರ್ಶಿಯಾಗಿ ಹರ್ಷ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ತಿಮ್ಲಾಪುರ ದೇವರಾಜು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊಬ್ಬರಿ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಶ್ರೀಕಾಂತ್ ಕೆಳಹಟ್ಟಿ, ಮನೋಹರ್ ಪಟೇಲ್, ಹಳೇಪಾಳ್ಯ ರಂಗಧಾಮಯ್ಯ ಇದ್ದರು.