ಕೊರಟಗೆರೆ : ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ಆದಾಯದ ಮೂಲವಾಗಿದ್ದು, ರೈತರಿಗೆ ಅವೇ ಆಧಾರಸ್ತಂಭ, ಹಾಲು ಸರಬರಾಜು ಮಾಡಿ ಇಂದಿಗೂ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಸಿದ್ದರಬೆಟ್ಟ ಶ್ರೀಗಳಾದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ರೈತರ ಮತ್ತು ಎಂಪಿಸಿಎಸ್ ನೌಕರರ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ, ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಕೊರಟಗೆರೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು, ತುಮಕೂರು ಹಾಲು ಒಕ್ಕೂಟ ಮಲ್ಲಸಂದ್ರ ಇವರ ಸಹಯೋಗದೊಂದಿಗೆ ಏರ್ಪಡಿಸಲಾದ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.
ಪ್ರಸಕ್ತ ಸಾಲಿನ ಧ್ಯೇಯವು ಹೈನುಗಾರಿಕೆ ವಲಯದಲ್ಲಿ ಸುಸ್ಥಿರತೆ, ಪೌಷ್ಠಿಕಾಂಶ, ಮತ್ತು ಸಾಮಾಜಿಕ ಆರ್ಥಿಕ ಸಬಲೀಕರಣ ಸಾಧಿಸುವುದಾಗಿದೆ. ಹಾಲು ಎಲ್ಲರೂ ಸೇವಿಸುವ, ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ, ವ್ಯಕ್ತಿ ಆರೋಗ್ಯದಿಂದ ಇರಲು ಬೇಕಾಗುವ ಎಲ್ಲಾ ಪೌಷ್ಠಿಕಾಂಶ ಮತ್ತು ಖನಿಜಾಂಶಗಳು ಇದರಲ್ಲಿವೆ ಎಂದರು.
ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ರೈತರು ಆರ್ಥಿಕವಾಗಿ ಮುಂದುವರಿಯಲು ಹಾಲು ಉತ್ಪಾದನೆ ಬಹಳ ಮುಖ್ಯವಾಗಿದ್ದು, ರೈತರು ಸಹಕಾರ ಸಂಘದ ಮೂಲಕ ವಹಿವಾಟು ಮಾಡಿದ್ದಲ್ಲಿ ಸಂಘ ಹಾಗೂ ಹಾಲು ಉತ್ಪಾದಕರಿಬ್ಬರೂ ಉತ್ತಮ ಲಾಭಾಂಶ ಪಡೆಯಬಹುದು, ಜೊತೆಗೆ ಸಂಘ ಸೇರಿದಂತೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು ಎಂದರು.
ಶಾಸಕ ಡಾ.ಜಿ ಪರಮೇಶ್ವರ್ ಮಾತನಾಡಿ, ಹಾಲು ಉತ್ಪಾದನೆಯು ಭಾರತ ದೇಶದಲ್ಲಿ ಹೊಸ ಆಂದೋಲನವನ್ನೇ ಸೃಷ್ಠಿಸಿದೆ, ಪ್ರಪಂಚದಲ್ಲೇ ಹೆಚ್ಚಾಗಿ ಹಾಲು ಉತ್ಪಾದಿಸುವ ದೇಶವೆಂದರೆ ಭಾರತ, ಈ ವಿಷಯದಲ್ಲಿ ಬೇರೆ ದೇಶವು ಊಹೆ ಸಹ ಮಾಡಿರಲಿಲ್ಲ ಎಂದು ತಿಳಿಸಿದರು.
ಹಾಲು ಉತ್ಪಾದನಾ ಸಂಘದ ಸಂಸ್ಥಾಪಕ ಪ್ರೋ.ಕುರಿಯನ್ ರವರು ಭಾರತವು ಬಡತನದಲ್ಲಿದ್ದಂತಹ ವೇಳೆ ಕೇರಳದಿಂದ ಗುಜರಾತ್‍ಗೆ ಹೋಗಿ ಹಾಲು ಉತ್ಪಾದನಾ ಸಂಘಗಳನ್ನು ಕಟ್ಟಿ ಇಡೀ ಪ್ರಪಂಚಕ್ಕೆ ಹಾಲು ಉತ್ಪಾದನೆ ಮತ್ತು ಮಾರಾಟ ಮಾಡುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
ಲಾಲ್ ಬಹುದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ ಹಾಲು ಉತ್ಪಾದನೆ ಸಂಘವು ಪ್ರಾರಂಭಗೊಂಡು ಅಂದಿನಿಂದ ಇಲ್ಲಿಯವೆರಗೂ ಜನರಿಗೆ ಪರಶುದ್ಧ ಹಾಲನ್ನು ಉತ್ಪಾದಿಸಿ ಮಾರಾಟ ಮಾಡುತ್ತ ದೇಶದಲ್ಲಿ ನಂ1 ಸ್ಥಾನಕ್ಕೆ ಬಂದಿದೆ, ಇದು ಯಾವ ಉದ್ಯೋಗಕ್ಕೂ ಕಡಿಮೆ ಇಲ್ಲ, ಲಕ್ಷಾಂತರ ಜನ ಹಾಲು ಉತ್ಪಾದನೆ, ಮಾರಾಟ, ಶೇಖರಣೆಯನ್ನು ಪ್ರತಿನಿತ್ಯ ಮಾಡುತ್ತಾರೆ.
ಮಹಿಳೆಯರು ಕೂಡ ಹೆಚ್ಚಾಗಿ ಸ್ತ್ರೀಶಕ್ತಿ ಸಂಘದಲ್ಲಿ ವಹಿವಾಟು ನಡೆಸುತ್ತಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಸಂಘಗಳು ಇದೆ, ಸಂಘವು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ, 2023ಕ್ಕೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಸಂಪೂರ್ಣ ಖಚಿತ, ಬಂದ ಕೂಡಲೇ ಹಾಲು ಉತ್ಪಾದಕರ ಸಹಕಾರ ಸಂಘಗಳ ಬೇಡಿಕೆಯನ್ನು ತಿಳಿಸಿ ಪ್ರಣಾಳಿಕೆಯಲ್ಲಿ ಮುದ್ರಿಸಿ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.
ಕೆಎಂಎಫ್‍ನಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ:-
ಕೊರಟಗೆರೆಯಲ್ಲಿ ಹಾಲು ಉತ್ಪಾದಕರ ಸಂಘದಿಂದ ನಡೆದ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ರೈತ ಹಾಗೂ ರಾಸುಗಳ ಫಲಾನುಭವಿ ಕುಟುಂಬಕ್ಕೆ 50 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್‍ನ್ನು ಶ್ರೀಗಳು ಸೇರಿದಂತೆ ಮಾಜಿ ಡಿಸಿಎಂ ಕಾರ್ಯಕ್ರಮದಲ್ಲಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ ಮಹಾಲಿಂಗಯ್ಯ, ಪಿಸಿಓಆರ್‍ಡಿ ಬ್ಯಾಂಕ್‍ನ ಅಧ್ಯಕ್ಷರಾದ ಡಿ.ಕೃಷ್ಣಕುಮಾರ್, ಮಲ್ಲಸಂದ್ರ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಎಂ.ಕೆ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಡಾ.ಬಿಪಿ ಸುರೇಶ್, ಕೊರಟಗೆರೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಗುಂಡಿನಪಾಳ್ಯ ಈಶ್ವರಯ್ಯ, ಪಾವಗಡ ತಾಲ್ಲೂಕಿನ ಹಾಲು ಒಕ್ಕೂಟದ ಅಧ್ಯಕ್ಷ ಚೆನ್ನಮಲ್ಲಪ್ಪ, ಪಪಂ ಸದಸ್ಯ ಎಡಿ ಬಲರಾಮಯ್ಯ, ಓಬಳರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಶ್ವತ್ಥ್‍ನಾರಾಯಣ್, ಅರಕೆರೆ ಶಂಕರ್, ತಾಪಂ ಮಾಜಿ ಅಧ್ಯಕ್ಷ ರಾಮಯ್ಯ, ಅರುಣ್‍ಕುಮಾರ್ ,ಎಲ್ ರಾಜಣ್ಣ ,ಚಿಕ್ಕರಂಗಯ್ಯ , ಸೇರಿದಂತೆ ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು , ಪದಾಧಿಕಾರಿಗಳು, ರೈತರು ಹಾಜರಿದ್ದರು.