ಗುಬ್ಬಿ : ಪ್ರತಿ ಬಾರಿ ಅವಕಾಶ ಕಳೆದುಕೊಂಡ ನಮ್ಮ ಸಮಾಜ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲೇಬೇಕು.ಇದು ತಾಯಿಯ ಗಮನ ಸೆಳೆಯಲು ಮಗು ಅಳುವ ರೀತಿಯ ಬೇಡಿಕೆಯಾಗಿದೆ ಕೂಡಲೇ ಬಿಜೆಪಿ ವರಿಷ್ಠರು ಗುಬ್ಬಿ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ನಿರ್ದೇಶಕ ಎನ್.ಸದಾಶಿವಯ್ಯ ಒತ್ತಾಯಿಸಿದರು. ಪಟ್ಟಣದ ಹೊರ ವಲಯದ ಹೇರೂರು ಬಳಿಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯಿತ ಸಮಾಜದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಳಿದ ವರ್ಗಕ್ಕೆ ಎರಡು ಬಾರಿ ಹೋರಾಟ ಮಾಡಿದ ನಮ್ಮ ಸಮಾಜ ಕ್ಷೇತ್ರದಲ್ಲಿ ಅತೀ ಹೆಚ್ಚು ಮತ ಇದ್ದು ನಿರ್ಣಾಯಕ ಎನಿಸಿದ್ದೇವೆ ಎಂದರು.
ಗುಬ್ಬಿಯಲ್ಲಿ ಬಿಜೆಪಿಗೆ ವೀರಶೈವ ಲಿಂಗಾಯಿತ ಅಭ್ಯರ್ಥಿ ನಿಲ್ಲಿಸಿದರೆ ಗೆಲ್ಲುವ ಎಲ್ಲಾ ಅವಕಾಶವೇ ಹೆಚ್ಚು ಕಾಣುತ್ತಿದೆ. ಗೆಲ್ಲುವ ಮಾನದಂಡ ಅನುಸರಿಸಿದರೆ ಅರ್ಹತೆಯೂ ಇರುವ ಮೂವರು ಪ್ರಬಲ ಆಕಾಂಕ್ಷಿಗಳು ನಮ್ಮ ಸಮಾಜದಲ್ಲಿದ್ದಾರೆ. ದಿಲೀಪ್ ಕುಮಾರ್, ಚಂದ್ರಶೇಖರಬಾಬು ಹಾಗೂ ಎನ್.ಸಿ.ಪ್ರಕಾಶ್ ಈ ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ಹೆಚ್ಚು ಮತಗಳ ಜೊತೆ ಬೇರೆ ಸಮುದಾಯವನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಸಿಕೊಡುತ್ತೇವೆ ಎಂದರು. ಕಳೆದ 22 ವರ್ಷದಿಂದ ಮೌನಕ್ಕೆ ಶರಣಾದ ವೀರಶೈವ ಲಿಂಗಾಯಿತ ಸಮುದಾಯ ಯುಡಿಯೂರಪ್ಪ ಅವರ ನಾಯಕತ್ವ ಒಪ್ಪಿ ಚುನಾವಣೆ ನಡೆಸಿದೆ.ಪ್ರತಿ ಬಾರಿ ಅವಕಾಶ ವಂಚಿತರಾದ ನಾವುಗಳು ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಅಭ್ಯರ್ಥಿಯ ಗೆಲ್ಲಿಸಿ ಶಾಸಕರನ್ನಾಗಿ ಆಯ್ಕೆ ಮಾಡಲು ಬದ್ಧವಾಗಿದೆ. ಬಿಜೆಪಿ ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮಾನ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಹೇರೂರು ರಮೇಶ್, ವೀರಶೈವ ಲಿಂಗಾಯಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಸಿದ್ದಲಿಂಗಮೂರ್ತಿ, ಮುಖಂಡರಾದ ಪ್ರಮೋದ್,ವಂಶಿ ನಾಗರಾಜು,ಹೊಸಳ್ಳಿ ಗಿರೀಶ್,ಪಣಗಾರ್ ನಿಜಲಿಂಗಪ್ಪ, ಬಂಡಿಹಳ್ಳಿ ಶಿವಣ್ಣ, ಶಿವರಾಮಯ್ಯ, ಬಾಳೆಕಾಯಿ ಬಸವರಾಜು, ಗಂಗಾಧರ್, ವಿಜಯಕುಮಾರ್, ದಯಾನಂದ, ನಟರಾಜು, ಆರ್.ಬಿ.ಜಯಣ್ಣ, ಸಿದ್ದರಾಮಣ್ಣ, ರೇಣುಕಪ್ಪ, ಗುರುವಣ್ಣ ಸೇರಿದಂತೆ ತಾಲ್ಲೂಕಿನ ಸಮಾಜದ ಮುಖಂಡರು ಭಾಗವಹಿಸಿದ್ದರು.