ಜಿಲ್ಲೆತುಮಕೂರುತುಮಕೂರು ಗ್ರಾಮಾಂತರ

ತಾಕತ್ತಿದ್ದರೆ ನಮ್ಮ ಅಶ್ವಮೇಧ ಕುದುರೆ ಬಿ.ಸುರೇಶಗೌಡರನ್ನ ಕಟ್ಟಿ ಹಾಕಿ ವಿಪಕ್ಷಗಳಿಗೆ ಮಾಜಿ ಸಿ.ಎಂ.ಸದಾನಂದಗೌಡ ಸವಾಲು

ತುಮಕೂರು : ಧರ್ಮ ಸಂಸ್ಥಾಪನಾರ್ಥವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ಎಂಬ ಆಶ್ವಮೇಧಯಾಗಕ್ಕೆ ಸುರೇಶಗೌಡ ಎಂಬ ಕುದುರೆಯನ್ನು ಬಿಟ್ಟಿದ್ದೇವೆ.ವಿರೋಧಪಕ್ಷಗಳಿಗೆ ತಾಕತ್ತು ಇದ್ದರೆ ಈ ಕುದುರೆಯನ್ನು ಕಟ್ಟಿ ಹಾಕಿ ಎಂದು ಮಾಜಿ ಸಿ.ಎಂ. ಡಿ.ಬಿ.ಸದಾನಂದಗೌಡ ಸವಾಲು ಹಾಕಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಮತ್ತು ಹೆಬ್ಬೂರು ಹೋಬಳಿಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,10 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ದಿ ಹೊಳೆಯನ್ನೇ ಹರಿಸಿದ ಬಿ.ಸುರೇಶಗೌಡ,2018ರ ಚುನಾವಣೆಯಲ್ಲಿ ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದಿಂದ ಕೂದಲೆಳೆಯ ಅಂತರದಲ್ಲಿ ಸೋಲು ಕಂಡಿದ್ದಾರೆ. ಆದರೆ ಈ ಬಾರಿ ಅದು ಸಾಧ್ಯವಿಲ್ಲ.ಶೇ100ಕ್ಕೆ ನೂರರಷ್ಟು ಗೆಲುವು ಖಚಿತ ಎಂದರು.
ತಮ್ಮ ಹತ್ತುವರ್ಷಗಳ ಶಾಸಕ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ 2000 ಕೋಟಿಗೂ ಅಧಿಕ ಅನುದಾನವನ್ನು ತಂದು ರಸ್ತೆ, ಚರಂಡಿ,ಸಮುದಾಯ ಭವನ, ವಿದ್ಯುತ್ ಸಂಪರ್ಕ, ಪ್ರಾಥಮಿಕ ಶಾಲೆಗಳ ಅಭಿವೃದ್ದಿ ಸೇರಿದಂತೆ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದರೆ, ಈಗಿನ ಶಾಸಕರು ಕೇಂದ್ರದಿಂದ ಬಿಡುಗಡೆಯಾದ 10 ಕೋಟಿ ರೂಗಳ ಅಭಿವೃದ್ದಿ ಕಾಮಗಾರಿಯ ಗುತ್ತಿಗೆದಾರರು ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲೇ ಬಿಟ್ಟಿಲ್ಲ.ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ ಎಂಬುದನ್ನು ಮತದಾರರು ತೀರ್ಮಾನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಪ್ರಶ್ನಿಸಿದರು.

ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ನಡೆಯುತ್ತಿರುವ ಜೆಡಿಎಸ್‌ನ ಪಂಚರತ್ನ ಯಾತ್ರೆ, ಪಂಚರ್ ಆಗಿದೆ.ಕಾಂಗ್ರೆಸ್‌ನ ಪ್ರಜಾದ್ವನಿಗೆ ಉಸಿರೇ ಇಲ್ಲದಂತಾಗಿದೆ.ಡಿ.ಕೆ.ಶಿ, ಸಿದ್ದರಾಮಯ್ಯ ಅವರದ್ದು ಒಂದೊಂದು ದ್ವನಿಯಾದರೆ, ಮಲ್ಲಿಕಾರ್ಜುನ ಖರ್ಗೆಅವರದೇ ಬೇರೆ ಆಲೋಚನೆಯಾಗಿದೆ.ದೇಶ, ನಾಡಿನ ಅಭಿವೃದ್ದಿ ಪರಿಕಲ್ಪನೆಯಲ್ಲಿ ದುಡಿಯುತ್ತಿರುವ ಎಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ.ಒಂದು ಕಾಲದಲ್ಲಿ ಹೊರದೇಶಗಳಿಂದ ಬೇಡುವ ಸ್ಥಿತಿಯಲ್ಲಿದ್ದ ಭಾರತ, ಇಂದು ಬೇರೆ ರಾಷ್ಟçಗಳಿಗೆ ನೀಡುವ ಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತ ಎಂದು ಸದಾನಂದಗೌಡ ನುಡಿದರು.
ಅಭಿವೃದ್ದಿ ಮತ್ತು ಒಳ್ಳೆಯ ಆಡಳಿತ ಬಿಜೆಪಿ ಪಕ್ಷದ ಎರಡು ಪ್ರಮುಖ ಸಿದ್ದಾಂತಗಳಾಗಿದ್ದು,ದ್ವೇಷ ರಹಿತ, ಜಾತಿ, ಧರ್ಮ ರಹಿತ ಆಡಳಿತಕ್ಕೆ ಇತ್ತೀಚಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ, ಸರ್ವರನ್ನು ಒಳಗೊಳ್ಳುವ 2023-24ನೇ ಸಾಲಿನ ಬಜೆಟ್ ಸಾಕ್ಷಿಯಾಗಿದೆ.ರೈತರಿಗೆ 5 ಲಕ್ಷ ರೂ ವರೆಗೆ ಬಡ್ಡಿರಹಿತ ಸಾಲ,ಭದ್ರಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಅನುದಾನ, ವಿದ್ಯಾಸಿರಿ ಯೋಜನೆ ವಿಸ್ತರಣೆ ನಾಡಿನ ಎಲ್ಲಾ ವರ್ಗಗಳ ಅಭಿವೃದ್ದಿಗೆ ಪೂರಕವಾಗಿವೆ.ನಾವು ಮಾತನಾಡುವುದನ್ನೇ ಕೆಲಸ ಮಾಡಿಕೊಂಡಿಲ್ಲ. ಇಂದು ನಮ್ಮ ಕೆಲಸಗಳು ಮಾತನಾಡುತ್ತಿವೆ. ಕ್ಷೇತ್ರದ ಸಮಗ್ರ ಅಭಿವೃದ್ದಿಗೋಸ್ಕರ ಬಿ.ಸುರೇಶಗೌಡರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ,ನನ್ನ 10 ವರ್ಷಗಳ ಆಡಳಿತದಲ್ಲಿ ಕುಡಿಯುವ ನೀರು, ಸರಕಾರಿ ಶಾಲೆಗಳ ಉನ್ನತ್ತೀಕರಣ, ವಿದ್ಯುತ್ ಸ್ಥಾವರಗಳ ನಿರ್ಮಾಣ, ಹೆಬ್ಬೂರು, ಗೂಳೂರು ಏತ ನೀರಾವರಿ, ಒಂದು ಐಪಿಸೇಟ್‌ಗೆ ಒಂದು ಟಿ.ಸಿ. ಪ್ರಾಯೋಗಿಕ ಯೋಜನೆಗಳ ತಂದು ಇಡೀ ದೇಶವನ್ನು ಮಾದರಿಯಾಗಿ ಮಾಡಿದ್ದೇನೆ.ಇದಕ್ಕೆ ಸದಾನಂದಗೌಡ ಬೆಂಬಲವೂ ಇತ್ತು. ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ರೂಗಳ ಅನುದಾನ ನೀಡಿ, ಸಹಕರಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಗಳು ಇಂದಿಗೂ ಒಂದು ಗುಂಡಿ ಬಿದ್ದಿಲ್ಲ. ಇಂದಿನ ಶಾಸಕರ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳ ಗುಂಡಿ ಮುಚ್ಚಲೇ ಹೊಸ ಯೋಜನೆ ತರಬೇಕಿದೆ.ಈ ಬಾರಿ ಶಾಸಕನಾದರೆ ನಾಗವಲ್ಲಿಗೆ ಪ್ರಥಮದರ್ಜೆ ಕಾಲೇಜು,ಹೊಸದಾಗಿ ನರಸಾಪುರಕ್ಕೆ ಮಹಿಳಾ ಕಾಲೇಜು ಸೇರಿದಂತೆ ಹಲವಾರು ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದು,ಈ ಬಾರಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಇಡೀ ವಿಶ್ವವೇ ತಿರುಗಿ ನೋಡುವಂತೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ವಾಗ್ಧಾನ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ,ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 2008-2018ರವರೆಗೆ ಆಗಿರುವ ಅಭಿವೃದ್ದಿಯನ್ನು ಹೊರತು ಪಡಿಸಿದರೆ, ಕಳೆದ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ.ಈ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ವಿಜಯ ಸಂಕಲ್ಪ ಯಾತ್ರೆ, ಬೂತ್ ವಿಜಯ ಅಭಿಯಾನ ಹಾಗೂ ವಿಜಯರಥ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಮತದಾರರು ಬಿ.ಸುರೇಶಗೌಡ ಕೈಹಿಡಿಯುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್,ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಶಂಕರ್, ಜಿ.ಪಂ.ಮಾಜಿ ಸದಸ್ಯರಾದ ರಾಜೇಗೌಡ,ರಾಮುಸ್ವಾಮಿಗೌಡ, ಆಂದಾನಪ್ಪ,ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಉಮೇಶಗೌಡ,ಬಿಜೆಪಿ ಮುಖಂಡ ಕುಮಾರ್,ತುಮುಲ್ ನಿರ್ದೇಶಕ ರೇಣುಕಾಪ್ರಸಾದ್, ಪ್ರಕಾಶ್,ಸಿದ್ದೇಗೌಡ,ವೈ.ಟಿ.ನಾಗರಾಜು, ಅರೆಕೆರೆ ರವಿ, ವಿಜಯಕುಮಾರ್, ಮಾಸ್ತಿಗೌಡ,ತಾರಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಂಚೆ ರಾಮಚಂದ್ರಯ್ಯ, ತಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಹಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker