ಮಧುಗಿರಿ : ನಾನು ಶಾಸಕನಾಗಿ ಆಯ್ಕೆಯಾದರೆ ಅಗ್ನಿವಂಶ ಕ್ಷತ್ರಿಯ ಸಮುದಾಯ ಸೇರಿದಂತೆ ಎಲ್ಲಾ ತಳ ಸಮುದಾಯಗಳಿಗೆ ರಾಜಕೀಯ ಪ್ರಾತಿನಿದ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಭರವಸೆ ನೀಡಿದರು.
ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ ಬುಧವಾರ ಅಗ್ನಿವಂಶ ಕ್ಷತ್ರಿಯ (ತಿಗಳ) ಜನಾಂಗದ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸ ಸೃಷ್ಟಿಸಲು ಸಾದ್ಯ. ತಳ ಸಮುದಾಯಗಳು ಸಂಘಟನೆಯಾಗಬೇಕು. ಸಂಘಟನೆಯಲ್ಲಿ ಶಕ್ತಿಯಿದೆ, ಸಂಘಟನೆಯಿಂದ ಮಾತ್ರ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾದ್ಯ. ಅಗ್ನಿವಂಶ ಕ್ಷತ್ರಿಯ ಸಮುದಾಯ ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇನೆ. ಶ್ರಮ ವಹಿಸಿ ಜನಪರವಾಗಿ ಕೆಲಸ ಮಾಡಿದಾಗ ಜನತೆ ಗುರುತಿಸುತ್ತಾರೆ. ಹೋರಾಟದ ಮನೋಭಾವ ಇದ್ದವರು ಮಾತ್ರ ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಲು ಸಾದ್ಯ. ಆದ್ದರಿಂದ ತಳ ಸಮುದಾಯಗಳು ಹೋರಾಟದ ಮನೋಭಾವ ರೂಡಿಸಿಕೊಳ್ಳಬೇಕು.
ರಾಜಕೀಯ ಅಧಿಕಾರ ದೊರೆತಾಗ ಮಾತ್ರ ತಳ ಸಮುದಾಯಗಳ ಅಭಿವೃದ್ಧಿ ಸಾದ್ಯ. ತಳ ಸಮುದಾಯಗಳಿಗೆ ರಾಜಕೀಯ ಅಧಿಕಾರ ಕೊಡಿಸಲು ನಾನು ಬಹಳಷ್ಟು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾದರೆ ಮುಂದೆಯೂ ತಿಗಳ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ರಾಜಕೀಯ ಪ್ರಾತಿನಿದ್ಯ ದೊರಕಿಸಿಕೊಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಅಗ್ನಿ ವಂಶ ಸಮುದಾಯದವರು ಇತರೆ ಸಮುದಾಯದವರೊಂದಿಗೆ ಅನ್ಯೋನ್ಯತೆಯಿಂದ ಜೀವನ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿ ಎಂದರು.
ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತೀ ಮನೆಗೂ ಕಾಂಗ್ರೆಸ್ ವತಿಯಿಂದ 200 ಯೂನಿಟ್ ವಿದ್ಯುತ್, ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ 2 ಸಾವಿರ ಹಣ ಹಾಗೂ ಹತ್ತು ಕೆ.ಜಿ ಅಕ್ಕಿ ವಿತರಿಸುವ ಗ್ಯಾರಂಟಿ ಕಾರ್ಡ್ ವಿತರಿಸಲಾಗುವುದು ಎಂದ ಅವರು ನನ್ನ ಅವಧಿಯಲ್ಲಿ, 16 ಸಾವಿರ ಮನೆಗಳ ನಿರ್ಮಾಣ ಮಾಡಿದ್ದು, ಗುಡಿಸಲು ಮುಕ್ತ ತಾಲೂಕಾಗಿ ಮಾಡಲಾಗಿತ್ತು. ನೋಟ್ ಪುಸ್ತಕ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ನೋಟ್ ಪುಸ್ತಕ ವಿತರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ವಿತರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ನನ್ನ ಐದು ವರ್ಷಗಳ ಅವಧಿಯ ಅಭಿವೃದ್ದಿ ಕಾರ್ಯಗಳು ಮತ್ತು ಇತ್ತೀಚಿನ ಐದು ವರ್ಷದ ಅವಧಿಯ ಆಡಳಿತ ತಾಳೆ ಮಾಡಿ ನೋಡಿ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಕ್ಷೇತ್ರದ ಅಭಿವೃದ್ದಿಗಾಗಿ ನನಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಮಾಜಿ ರೇವಣಸಿದ್ದಯ್ಯ ಮಾತನಾಡಿ ತಿಗಳ ಸಮುದಾಯದವರು ಸ್ವಾಭಿಮಾನಿಗಳಾಗಿದ್ದು, ಸರ್ಕಾರ ಎಲ್ಲ ಅನುಕೂಲಗಳನ್ನು ಮುಂದುವರಿದ ಜನಾಂಗದವರಿಗೇ ಮಾಡಲಾಗುತ್ತಿದ್ದು, ಆದರೆ ತಿಗಳ ಸಮುದಾಯದ ಅಭಿವೃದ್ಧಿ ನಿಗಮ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನವರು ಇಡೀ ಕರ್ನಾಟಕಕ್ಕೆ ಅನ್ನ ನೀಡಿದವರು. ಅನ್ನಭಾಗ್ಯ ಯೋಜನೆಯಂದ ಬಿಕ್ಷುಕರ ಸಂಖ್ಯೆ ಕಡಿಮೆಯಾಗಿದೆ ಎಂದ ಅವರು ಈ ಬಾರಿ ಕೆ.ಎನ್. ರಾಜಣ್ಣನವರನ್ನು 25 ಸಾವಿರ ಮತಗಳ ಅಂತರದಿAದ ಗೆಲುವು ಸಾಧಿಸಲಿದ್ದಾರೆ ಎಂದರು.
ಜಿ.ಪಂ ಮಾಜಿ ಸದಸ್ಯ ಡಿ. ಅರ್ಜುನ್ ಮಾತನಾಡಿ ಸಂಘಟನೆಗೆ ಎಲ್ಲವನ್ನು ಪಡೆದುಕೊಳ್ಳುವ ಶಕ್ತಿಯಿದ್ದು, ಸಮುದಾಯದ ಪ್ರತಿಯೊಬ್ಬರೂ ಸಂಘಟಿತರಾಗಬೇಕು ಆಗ ಮಾತ್ರ ಎಲ್ಲಾ ಸವಲತ್ತುಗಳು ಸಿಗಲಿವೆ. ಸಮುದಾಯಕ್ಕೆ ಇಂದಿಗೂ ರಾಜಕೀಯ ಅಧಿಕಾರ ದೊರೆತಿಲ್ಲ. ರಾಜಕೀಯ ಅಧಿಕಾರ ದೊರೆತಾಗ ಮಾತ್ರ ಸಮಾಜದ ಅಭಿವೃದ್ದಿ ಸಾದ್ಯ. ಆದ್ದರಿಂದ ನಾವೆಲ್ಲರೂ ಈ ಬಾರಿ ಕೆ.ಎನ್. ರಾಜಣ್ಣನವರಿಗೆ ಶಕ್ತಿ ತುಂಬೋಣ, ಆಸೆ ಆಮಿಷಗಳಿಗೆ ಬಲಿಯಾಗದೇ ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವದಿಸೋಣ ಎಂದು ಸಮುದಾಯಕ್ಕೆ ಕರೆ ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ಪುರಸಭಾ ಮಾಜಿ ಅಧ್ಯಕ್ಷರಾದ ಎಂ ಕೆ ನಂಜುಂಡಯ್ಯ, ಕೆ ಪ್ರಕಾಶ್, ತಾಲೂಕು ಕಾರ್ಯದರ್ಶಿ ರಾಮಕೃಷ್ಣಯ್ಯ, : ತಿಗಳರ ಸಂಘದ ತಾಲೂಕು ಅಧ್ಯಕ್ಷ ರಂಗನಾಥ್ ಮತ್ತಿತರರು ಹಾಜರಿದ್ದರು.