ಶ್ರೀಘದಲ್ಲಿಯೇ ಹೊಲೆಯ-ಮಾದಿಗರ ಸಾಂಸ್ಕೃತಿಕ ಸಮಾವೇಶ : ಕೋಡಿಹಳ್ಳಿ ಸಂತೋಷ್
ತುಮಕೂರು : ಆದಿ ಜಾಂಭವ ಬೃಹನ್ಮಠದ ಹಿರಿಯ ಶ್ರೀಗಳಾದ ಶ್ರೀ ಗುರುಪ್ರಕಾಶ್ ಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ಒಳಮೀಸಲಾತಿಗಾಗಿ ಒಂದಾಗಿರುವ ಹೊಲೆಯ,ಮಾದಿಗ ಸಮುದಾಯಗಳನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹೊಲೆಮಾದಿಗರ ಸಾಂಸ್ಕೃತಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಪತ್ರಕರ್ತ ಕೋಡಿಹಳ್ಳಿ ಸಂತೋಷ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಆಚಾರ, ವಿಚಾರ, ಸಂಪ್ರದಾಯಗಳಲ್ಲಿ ಒಂದೇ ಆಗಿರುವ ಪರಿಶಿಷ್ಟ ಜಾತಿಗಳಲ್ಲಿನ ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಕೆಲವರು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಒಡೆದು ಆಳುವ ನೀತಿ ಅನುಸರಿಸಿದ ಪರಿಣಾಮ ಎರಡು ಸಮುದಾಯಗಳ ಪರಸ್ವರ ಬೆನ್ನು ತಿರುಗಿಸಿ ಬದುಕುವಂತಹ ಸ್ಥಿತಿ ಇತ್ತು.ಆದರೆ ಒಳಮೀಸಲಾತಿ ಎಂಬ ವಿಷಯದಲ್ಲಿ ಎರಡು ಜಾತಿಗಳು ಸೇರಿ ಕಳೆದ 72 ದಿನಗಳಿಂದ ಬೆಂಗಳೂರಿನ ಉದ್ಯಾನವನದಲ್ಲಿ ಪ್ರತಿಭಟನಾ ನಿರತರಾಗಿದ್ದು,ಇವರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಸಲುವಾಗಿ ಶೀಘ್ರವೇ ಹೊಲೆ ಮಾದಿಗರ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸ್ಥಾಪಿಸಿ,ಆ ಮೂಲಕ ಬೃಹತ್ ಸಾಂಸ್ಕೃತಿಕ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.ಮಾರ್ಚ ಮೊದಲ ಅಥವಾ ಎರಡನೇ ವಾರದಲ್ಲಿ ಈ ಸಮಾವೇಶ ನಡೆಯಲಿದೆ ಎಂದರು.
ಎಲ್.ಜಿ.ಹಾವನೂರು ಆಯೋಗದಿಂದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿದ ಕೊರಮ, ಕೊರಚ, ಲಂಬಾಣಿ ಮತ್ತು ಬೋವಿಗಳ ಆ ವರ್ಗದಲ್ಲಿಯೇ ಇರುವ ಕೆಲವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.ಸರಕಾರದ ಮುಂದೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಯಾವುದೇ ಜಾತಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ.ಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣದಿಂದ ಹೊಲೆ ಮಾದಿಗ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬುದೇ ಒಳಮೀಸಲಾತಿ ಬೇಡಿಕೆಯ ಉದೇಶವಾಗಿದೆ.ಇದನ್ನು ಅರ್ಥ ಮಾಡಿಕೊಂಡಿರುವ ಬಲಗೈ ಮತ್ತು ಎಡಗೈ ಸಮುದಾಯಗಳು ತಾತ್ವಿಕವಾಗಿ ಒಗ್ಗೂಡಿವೆ.ಇವುಗಳನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಿ,ಹೋರಾಟದ ಬಲವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಸಾಂಸ್ಕೃತಿಕ ಸಮಾವೇಶವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಂತೋಷ ಕೋಡಿಹಳ್ಳಿ ನುಡಿದರು.
ಕೋಡಿಹಳ್ಳಿ ಆದಿಜಾಂಭವ ಬೃಹನ್ಮಠದ ಶ್ರೀಗುರುಪ್ರಕಾಶ ಮುನಿ ಮಾತನಾಡಿ,ಹತ್ತು ಶತಮಾನಗಳ ಇತಿಹಾಸವಿರುವ ಕೋಡಿಹಳ್ಳಿ ಮಠವೂ ಮುನಿ ಮತ್ತು ಅವಧೂತ ಪರಂಪರೆಯನ್ನು ಮೈಗೂಡಿಸಿಕೊಂಡು ಬಂದಿರುವ ಮಠ.ಮಾದಿಗರ ಪಂಚಪೀಠಗಳಲ್ಲಿಯೇ ಮೂಲ ಮಠವಾಗಿದೆ.ಆದರೆ ಈ ಮಠಕ್ಕೆ ಎಲ್ಲಾ ಸಮುದಾಯದವರು ನಡೆದುಕೊಳ್ಳುವುದು ವಾಡಿಕೆ. ಮಾದಿಗರಿಗಿಂತ ಹೆಚ್ಚಾಗಿ ಬಲಗೈ ಸಮುದಾಯದವರು ಮಠದ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಾ ಬಂದಿದ್ದಾರೆ.ಮಠಕ್ಕೆ ಮಾದಿಗ ಮತ್ತು ಹೊಲೆಯ ಸಮುದಾಯಗಳು ಎರಡು ಕಣ್ಣುಗಳಿದ್ದಂತೆ. ಇವರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಒಗ್ಗೂಡಿಸಿ,ಒಳಮೀಸಲಾತಿ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ನಮ್ಮ ಮೊದಲ ಪ್ರಯತ್ನ ಇದಾಗಿದೆ.ಇದಕ್ಕೆ ಎರಡು ಸಮುದಾಯದ ಮುಖಂಡರು ಕೈಜೋಡಿಸ ಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಕೊಟ್ಟ ಶಂಕರ್,ಹನುಮನಹಳ್ಳಿಯ ವೆಂಕಟಾವಧೂತ ಆಶ್ರಮದ ಭೂತಪ್ಪಸ್ವಾಮೀಜಿ, ಟ್ರಸ್ಟಿಗಳಾದ ಎಸ್.ನಾಗಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.