ಶಿರಾ : 2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ಚುನಾವಣೆ ಎದುರಿಸಲು ಶಕ್ತಿಯುತವಾಗಿದ್ದೇನೆ. ನನಗೆ ಟಿಕೇಟ್ ನೀಡಿದರೆ ಜೆಡಿಎಸ್ ಪಕ್ಷದಿಂದ ಗೆದ್ದು, ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡಲು ಕೈ ಬಲಪಡಿಸುತ್ತೇನೆ ಎಂದು ರಾಜ್ಯ ಜೆಡಿಎಸ್ ಪರಿಷತ್ ಸದಸ್ಯರು ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಆರ್.ಉಗ್ರೇಶ್ ಹೇಳಿದರು.
ಅವರು ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದಲ್ಲಿರುವ ಆವರಣದಲ್ಲಿ ಆರ್.ಉಗ್ರೇಶ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಆರ್.ಉಗ್ರೇಶ್ ಅವರ 55ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿ ಮಾತನಾಡಿದರು. ಶಿರಾ ತಾಲ್ಲೂಕಿನಲ್ಲಿ ಕಳೆದ 35 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ದಿವಂಗತ ಮಾಜಿ ಸಚಿವರಾದ ಬಿ.ಸತ್ಯನಾರಾಯಣ ಅವರ ಜೊತೆ ಪಕ್ಷದಲ್ಲಿ ಹಗಲಿರುಳೆನ್ನದೆ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. ನಾನು ಎಂದೂ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿಲ್ಲ. ಈ ವರ್ಷ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನನ್ನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅವರ ಪ್ರೀತಿ ಅಭಿಮಾನಕ್ಕೆ ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದರು.
ನನ್ನ ರಾಜಕೀಯ ಗುರುಗಳಾದ ದಿವಂಗತ ಮಾಜಿ ಸಚಿವರಾದ ಬಿ.ಸತ್ಯನಾರಾಯಣ ಅವರ ಮಾರ್ಗದರ್ಶನದಂತೆ, ಅವರು ಹಾಕಿಕೊಟ್ಟಿರುವ ತತ್ವ ಸಿದ್ದಾಂತಗಳ ಅನುಸಾರ ಶಿರಾ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದಲ್ಲಿ ಕಟ್ಟಾಳುವಾಗಿ ಹೈಕಮಾಂಡ್ ಆದೇಶಕ್ಕೆ ಬದ್ಧನಾಗಿರುತ್ತೇನೆ. ಜನರ ಪ್ರೀತಿ ವಿಶ್ವಾಸ ಸದಾ ಹೀಗೆ ನನ್ನ ಮೇಲೆ ಇರಲಿ ಎಂದರು.
ಸಂಭ್ರಮದ ಹುಟ್ಟುಹಬ್ಬ ಆಚರಣೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ಅವರ 55ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲ್ಲೂಕಿನ ಭೂವನಹಳ್ಳಿ ಗ್ರಾಮದ ದಿವಂಗತ ಮಾಜಿ ಸಚಿವರಾದ ಬಿ.ಸತ್ಯನಾರಾಯಣ ಅವರ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ನಗರದ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಅಭಿಮಾನಿಗಳು ಅದ್ಧೂರಿ ಮೆರವಣಿಗೆ ಮಾಡಿದರು. ಅಂಬೇಡ್ಕರ್ ಸರ್ಕಲ್‌ನಲ್ಲಿ ಜೆಸಿಬಿಗಳ ಮೂಲಕ ಹೂವಿನ ಮಳೆಗರೆದರು. ನಂತರ ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದಲ್ಲಿರುವ ಆವರಣದಲ್ಲಿ 55 ಕೇಜಿ ತೂಕದ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿದರು.
ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಜಿ.ಪಂ. ಸದಸ್ಯ ಎಸ್.ರಾಮಕೃಷ್ಣ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರೆಹಮತ್ ಉಲ್ಲಾ ಖಾನ್, ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ಡಿ.ಮಲ್ಲೇಶ್, ನಗರಸಭಾ ಸದಸ್ಯರಾದ ಆರ್.ರಾಮು, ಮಾಜಿ ಸದಸ್ಯ ಆರ್.ರಾಘವೇಂದ್ರ, ಜೆಡಿಎಸ್ ಮುಖಂಡರಾದ ಕಲ್ಕೆರೆ ರವಿಕುಮಾರ್, ರವಿಶಂಕರ್, ಕೆ.ಸಿ.ಆರ್.ಗೌಡ, ಬಿ.ಆರ್.ನಾಗಭೂಷಣ್, ಪುಟ್ಟಣ್ಣ, ಟಿ.ಡಿ.ನರಸಿಂಹಮೂರ್ತಿ, ಉಗ್ರೇಶ್ ಗೌಡ, ಶ್ರೀರಂಗ, ಭೂಕಾಂತ ಸೇರಿದಂತೆ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.