ಜಿಲ್ಲೆತುಮಕೂರುಮಧುಗಿರಿ

ಮಾನವೀಯ ಮೌಲ್ಯವುಳ್ಳ ಸಮಾಜ ನಿರ್ಮಾಣಕ್ಕೆ ಮುಂದಾಗಿ : ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ : ಈ ಶಿಕ್ಷಕ ವೃತ್ತಿಯಲ್ಲಿ ನೂರೆಂಟು ಸಮಸ್ಯೆಗಳಿದ್ದರೂ ಮಕ್ಕಳ ಹಾಗೂ ಉತ್ತಮ ಸಮಾಜಕ್ಕೆ ಶಿಕ್ಷಕರು ನೀಡುವ ತ್ಯಾಗ ಆದರ್ಶನೀಯವಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ತಾಲೂಕು ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದಿಂದ ನಡೆದ ಸಾವಿತ್ರಿಬಾಯಿ ಪುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಉತ್ತಮ ಸಮಾಜ ಮುಖ್ಯವಾಗಿದ್ದು ಇದರಲ್ಲಿ ಶಿಕ್ಷಕರ ಪಾತ್ರ ತುಂಬ ಹಿರಿದಾಗಿದೆ ಎಂದರು.
ಇಂತಹ ಆದರ್ಶಗಳು ಮಾತೆ ಸಾವಿತ್ರಿ ಬಾಯಿಪುಲೆಯವರಿಂದ ಬಂದಿದೆ. ಮಕ್ಕಳಿಗೆ ಹೆತ್ತವರಿಗಿಂತ ಶಿಕ್ಷಕರೇ ಮಾದರಿಯಾಗಿದ್ದು ಗುಣಮಟ್ಟದ ಹಾಗೂ ಮಾನವೀಯ ಮೌಲ್ಯವುಳ್ಳ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದರು.
ಓಪಿಎಸ್ ಗೆ ಸರ್ಕಾರದ ನಿರ್ಲಕ್ಷ : ರಾಜ್ಯಾದ್ಯಂತ ನಡೆಯುತ್ತಿರುವ ಸರ್ಕಾರಿ ನೌಕರರ ಓಪಿಎಸ್ ಹೋರಾಟವನ್ನು ಜೆಡಿಎಸ್ ಸದನದಲ್ಲಿ ಬೆಂಬಲಿಸಿದ್ದರೂ ಸರ್ಕಾರ ನಿರ್ಲಕ್ಷವಹಿಸಿದೆ. ನಾನು ಬೆಂಗಳೂರಿನ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದು ಸರ್ಕಾರ ಓಪಿಎಸ್ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಡಿಡಿಪಿಐ ಕೆ.ಜಿ.ರಂಗಯ್ಯ ಮಾತನಾಡಿ, ಶಿಕ್ಷಕರಲ್ಲಿ ಮಹಿಳಾ ಶಿಕ್ಷಕಿಯರು ಮಕ್ಕಳ ಮನಸ್ಸನ್ನು ಅರಿತು ಭೋದನೆ ಮಾಡುತ್ತಾರೆ. ಅವರದು ತಾಯಿ ಹೃದಯವಾಗಿದ್ದು ಸಾವಿತ್ರಿ ಬಾಯಿಪುಲೆಯವರ ಆದರ್ಶಗಳು ಇಂದಿಗೂ ಕಾಣುತ್ತಿವೆ. 1855 ರಿಂದ ಆರಂಭವಾದ ಸಾವಿತ್ರಿ ಬಾಯಿಪುಲೆಯವರ ಹೋರಾಟ ಮಹಿಳೆಯರ ಮೇಲಿನ ಎಲ್ಲ ಅನಿಷ್ಟ ಪದ್ಧತಿಯನ್ನು ಕೊನೆಗಾಣಿಸಲು ನಡೆಸಿದ್ದರು. ಅದು ಇಂದಿನ ಮಹಿಳೆಯರ ಸ್ವಾತಂತ್ರಕ್ಕೆ ಮೊದಲ ಅಡಿಪಾಯವಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ ಮಾತನಾಡಿ ಒಬ್ಬ ಆದರ್ಶ ತಾಯಿ ನೂರು ಶಿಕ್ಷಕರಿಗೆ ಸಮ. ಇಂತಹ ತಾಯಿ ಮನಸ್ಸಿನ ಶಿಕ್ಷಕಿಯರಿಗೆ ಸಾವಿತ್ರಿ ಬಾಯಿಪುಲೆಯವರೇ ಆದರ್ಶವಾಗಿದ್ದು ಮಹಿಳೆಯರಿಂದಲೇ ಇಂದು ಸಮಾಜ ಕನಿಷ್ಟ ಸರಿದಾರಿಯಲ್ಲಿ ಸಾಗುತ್ತಿದೆ ಎಂದರು.
ಪುರಸಭೆ ಸದಸ್ಯ ಜಗಣ್ಣ ಮಾತನಾಡಿ, ಮಹಿಳಾ ಶಿಕ್ಷಕರು ತಾಯಿಯ ಸ್ವಾರೂಪ. ನಿಮ್ಮಿಂದಲೇ ಇಂದು ಪುರುಷ ರತ್ನಗಳ ಉದಯವಾಗುತ್ತಿದ್ದು ನಮ್ಮ ಶಾಸಕರು ಐಎಎಸ್ ಮಾಡಲು ಅವರ ತಾಯಿಯ ಕಷ್ಟವೇ ಕಾರಣ. ಹಾಗೆಯೇ ಅವರು ಶಾಸಕರಾಗಲು ನಿಮ್ಮಂತಹ ತಾಯಂದಿರ ಆಶೀರ್ವಾದವೇ ಕಾರಣವಾಗಿದ್ದು ಕ್ಷೇತ್ರದಲ್ಲಿ ಈ ಸಜ್ಜನ ಸಮಾಜ ಉಳಿಯಲು ನೀವುಗಳು ಹರಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಾಷ್ಟçಪತಿ ಪದಕ ಪಡೆದ ಡಿವೈಎಸ್ಪಿ ವೆಂಕಟೇಶ್ ನಾಯ್ಡುರವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಇಓ ಕೃಷ್ಣಪ್ಪ, ಬಿಆರ್‌ಸಿ ಹನುಮಂತರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಡಿ.ನರಸಿಂಹಮೂರ್ತಿ, ತಾಲೂಕು ಉಪಾಧ್ಯಕ್ಷ ಶಶಿಕುಮಾರ್, ಸಾವಿತ್ರಿ ಬಾಯಿಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಮೀನಾಕ್ಷಿ, ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು, ಚಂದ್ರಶೇಖರ್ ಬಾಬು, ಸಿಆರ್‌ಸಿ ಚೆನ್ನಬಸಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಂಗನಾಥ್, ಎಸ್.ಎನ್.ಹೆಚ್, ನರಸೇಗೌಡ, ಹಾಗೂ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker