ಶಿರಾ : ಪರಿಶಿಷ್ಟ ಜಾತಿಯ ಎಲ್ಲಾ ಉಪಜಾತಿಗಳು ಇಂದಿಗೂ ಕಷ್ಟಕರ ಜೀವನವನ್ನು ಅನುಭವಿಸುತ್ತಿದ್ದಾರೆ. ಅವರ ಸ್ಥಿತಿಗತಿಗಳನ್ನು ಸರಿಯಾಗಿ ಸರ್ಕಾರಗಳು ಸರಿಯಾರ್ತಿ ಅರ್ಥ ಮಾಡಿಕೊಳ್ಳದೆ ಒಳಮೀಸಲಾತಿಯ ಹೆಸರಿನಲ್ಲಿ ಒಡಕು ಮೂಡಿಸುತ್ತಿವೆ ಎಂದು ಬಂಜಾರ ಮುಖಂಡರಾದ ಶೇಷಾನಾಯ್ಕ ಹೇಳಿದರು.
ಅವರು ನಗರದ ಸೇವಲಾಲ್ ಭವನದಲ್ಲಿ ತುಮಕೂರು ಜಿಲ್ಲಾ ಭೋವಿ, ಲಂಬಾಣಿ, ಕೊರಮ , ಕೊರಚ ಸಮುದಾಯದ ಮುಖಂಡರಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ನ್ಯಾ.ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲೊರಟಿರುವ ಸರ್ಕಾರ ಕ್ರಮವನ್ನು ಜಿಲ್ಲೆಯ ಭೋವಿ, ಲಂಬಾಣಿ ,ಕೊರಮ ,ಕೊರಚ ಸಮುದಾಯದ ಎಲ್ಲರೂ ಖಂಡಿಸುತ್ತೇವೆ. ಒಳಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ 2023ರ ಜನವರಿ 10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಇದ್ದು, ಭೋವಿ, ಲಂಬಾಣಿ ,ಕೊರಮ ,ಕೊರಚ ಸಮುದಾಯದವರು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಭೋವಿ ಸಮಾಜದ ಸಂಘಟನಾ ಕಾರ್ಯದರ್ಶಿ ಕಾಶೀನಾಥ್ ಎಂ ಸೆಲ್ಲೆಲೋರ್ ಮಾತನಾಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶ ಮಾಡಲು ಮುಂದಾಗಿರುವ ಸರ್ಕಾರಗಳ ವಿರುದ್ಧ ಹಾಗೂ ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುತ್ತಿರುವ ಕಾರ್ಪೊರೇಟ್ ಬಂಡವಾಳಿಗ ಶಕ್ತಿಗಳ ವಿರುದ್ಧ ದಮನಿತ ಸಮುದಾಯಗಳು ಹೋರಾಡಬೇಕಿದೆ ಎಂದು ಹೇಳಿದರು.
ಯುವ ಮುಖಂಡ ಶ್ರೀನಿವಾಸ್ ಮಾತನಾಡಿ ರಾಜ್ಯದಲ್ಲಿ ಎರಡು ಕೋಟಿ ಜನಸಂಖ್ಯೆ ಇರುವ
ದಲಿತ ಸಮುದಾಯದ ಮತಬ್ಯಾಂಕಿಗಾಗಿ ರಾಜಕೀಯ ಪಕ್ಷಗಳು, ಪರಿಶಿಷ್ಟರನ್ನ ಇಬ್ಬಾಗ ಮಾಡಿ, ಪರಿಶಿಷ್ಟ ಜಾತಿಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ, ಮತ್ತೆಂದು ಪರಿಶಿಷ್ಟ ಬಂಧುಗಳು ಒಂದಾಗಬಾರದು ಎಂಬ ಸಾಮಾಜಿಕ ಸಮಾನತೆಯನ್ನ ಒಪ್ಪದ ರಾಜಕೀಯ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಸ್ವಾತಂತ್ರ÷್ಯ ಪಡೆದು ಏಳು ದಶಕಗಳಾದರೂ, ಪರಿಶಿಷ್ಟ ಭವಣೆ ಹೇಳತೀರದ್ದು, ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಹಣ ಇಂದಿಗೂ ಸರಿಯಾಗಿ ಬಳಕೆಯಾಗಲು ಬಿಡುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ದೋಷಪೂರಿತ ನ್ಯಾ.ಸದಾಶಿವ ವರದಿ ಅಪ್ರಸ್ತುತ ಎಂದರು.
ಭೋವಿ ಸಮಾಜದ ಜಿಲ್ಲಾದ್ಯಕ್ಷರಾದ ಹೆಚ್.ಉಮೇಶ್ ಮಾತನಾಡಿ ಈ ಹಿಂದೆ, ಆಂದ್ರಪ್ರದೇಶ , ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಒಳಮೀಸಲಾತಿಯ ವಿಚಾರದಲ್ಲಿ ಸರ್ಕಾರಗಳು ವಿಫಲಗೊಂಡಿವೆ. ಆದರೂ ಆಗಿಂದಾಗ್ಗೆ ಇಂತಹ ತಳಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದ ಬೆಳವಣಿಗೆ ಸಹಿಸದವರ ದಾಳಕ್ಕೆ ಪರಿಶಿಷ್ಟರು ಬಲಿಪಶುಗಳಾಗುತ್ತಿರುವುದು ಅತ್ಯಂತ ದುರಂತದ ವಿಚಾರ
ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಜಿಲ್ಲಾ ಭೋವಿ ಸಮಾಜದ ಅದ್ಯಕ್ಷರಾದ ಊರುಕೆರೆ ಹೆಚ್ .ಉಮೇಶ್, ತುಮಕೂರು ಮಹಾ ನಗರಪಾಲಿಕೆ ಸದಸ್ಯರಾದ ಮಂಜುನಾಥ್, ಶಿರಾ ನಗರಸಭೆ ಸದಸ್ಯೆ ಪೂಜಾ ಪಿ.
ನಗರ ಬಿಜೆಪಿ ಕಾರ್ಯದರ್ಶಿ ಗೋವಿಂದರಾಜು, ಬಂಜಾರ ಮುಖಂಡರಾದ ಶೇಷಾನಾಯ್ಕ, ಶ್ರೀನಿವಾಸ್, ನಾರಾಯಣ ನಾಯ್ಕ, ಭೋವಿ ಸಮಾಜ ತಾಲ್ಲೂಕು ಅದ್ಯಕ್ಷರಾದ ತಿಮ್ಮರಾಜು, ಕಾಶೀನಾಥ್ ,ಈಶ್ವರ್, ಡ್ಯಾಗೇರಹಳ್ಳಿ ಮಂಜಣ್ಣ, ಶಂಕರ್, ಧನಂಜಯ, ಬಾಬು, ಭೂತೇಶ್, ರಮೇಶ್, ಹುಲಗಪ್ಪ, ಶಿವಕುಮಾರ್ ಇನ್ನೂ ಮುಂತಾದ ಕೊಲಂಬೋ ಮುಖಂಡರು ಹಾಜರಿದ್ದರು.