ಶಿರಾ : ರಾಜ್ಯದಲ್ಲಿ ಸುಮಾರು 43 ಲಕ್ಷ ಬಲಿಜ ಜನಾಂಗವಿದೆ. 63 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಆದರೆ 2ಎ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ದೊರಕದ ಕಾರಣ ಬಲಿಜ ಜನಾಂಗ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಶಿರಾ ತಾಲ್ಲೂಕು ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ಡಾ.ಬಿ.ಗೋವಿಂದಪ್ಪ ಹೇಳಿದರು.
ಅವರು ಬಲಿಜ ಜನಾಂಗವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. 2ಎ ಮೀಸಲಾತಿ ಅಡಿಯಲ್ಲಿದ್ದ ಬಲಿಜ ಜನಾಂಗವನ್ನು 1994ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೋಯ್ಲಿ ಅವರು ವಿನಾಕಾರಣ ಯಾವುದೇ ಆಯೋಗದ ಶಿಫಾರಸ್ಸು ಇಲ್ಲದೆ 3ಎ ಗೆ ತಪ್ಪು ನಿರ್ಧಾರದಿಂದ ಸೇರಿಸಿರುವ ಕಾರಣ ಈವರೆಗೂ ಬಲಿಜ ಸಮುದಾಯ ಹಿಂದುಳಿದಿದೆ. 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಬಲಿಜ ಜನಾಂಗಕ್ಕೆ 2ಎ ಮೀಸಲಾತಿಯನ್ನು ಶೈಕ್ಷಣಿಕವಾಗಿ ಮುಂದುವರೆಯಲು ಮೀಸಲಾತಿ ಕೊಟ್ಟರು. ಆದರೆ ಉದ್ಯೋಗ ಹಾಗೂ ರಾಜಕೀಯ ಮೀಸಲಾತಿ ನೀಡಲಿಲ್ಲ. ಮುಂದುವರೆದ ಜನಾಂಗದ ಮಧ್ಯೆ ನಾವು ರಾಜಕೀಯವಾಗಿ ಅಧಿಕಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಲಿಜ ಜನಾಂಗಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿಯನ್ನು ಸರಕಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ತುಳಸಿರಾಮ್, ಉಪಾಧ್ಯಕ್ಷ ವಿರೂಪಾಕ್ಷ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಯುವ ಘಟಕದ ಅಧ್ಯಕ್ಷ ಸಿಂಚುನಾರಾಯಣ್, ಮಾಜಿನಗರ ಸಭಾ ಸದಸ್ಯ ನಟರಾಜ್, ಡೈರಿ ಕುಮಾರ್, ಎಸ್‌ಎನ್ ಜಯಪಾಲ್, ಮಧುಸೂದನ್, ಹೇಮಂತ್, ಗಿರಿಧರ್, ಲಕ್ಷ್ಮೀ, ಕೋಟೆ ವಿಜಯಮ್ಮ, ಶಕುಂತಲಾ, ಶೋಭಾ, ಪುಟ್ಟತಾಯಮ್ಮ ಸೇರಿದಂತೆ ಹಲವರು ಹಾಜರಿದ್ದರು.