ಅಟವಿ ಶ್ರೀಗಳು ಗೋವು, ಮೂಕ ಪ್ರಾಣಿಗಳ ಸೇವೆ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಅವರ ಆಶಯ ಈಡೇರಿಸಬೆಕಿದೆ : ಶಾಸಕಿ ಶ್ರೀಮತಿ ಲಕ್ಷ್ಮೀಹೆಬ್ಬಾಳ್ಕರ್
ತುಮಕೂರು : ಚಿಕ್ಕತೊಟ್ಲುಕೆರೆಯ ಅಟವಿ ಸುಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಗೂ ಅವಿನಾಭ ಸಂಬಂಧವಿದೆ. ಈ ಮಠದ ಮೂಲ ಸ್ವಾಮೀಜಿಗಳ ನಮ್ಮ ಜಿಲ್ಲೆಯ ಅಂಕಲಗಿಯವರು,ಅಲ್ಲಿ ಒಂದು ಮಠ ಸ್ಥಾಪಿಸಿ,ತದನಂತರ ಇಲ್ಲಿಗೆ ಬಂದು ನೆಲಸಿ, ತಪೋಗೈದು ಹಲವಾರು ಪವಾಡಗಳನ್ನು ಮಾಡಿದ್ದಾರೆ.ಹಾಗಾಗಿಯೇ ಅಷ್ಟು ದೂರದಿಂದ ಇಲ್ಲಿಯವರೆಗೆ ಶ್ರೀಮಠದ ದರ್ಶನಕ್ಕೆ ನಾನು ಬಂದಿದ್ದೇನೆ ಎಂದು ಶಾಸಕ ಶ್ರೀಮತಿ ಲಕ್ಷ್ಮೀಹೆಬ್ಬಾಳ್ಕರ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಆಯೋಜಿಸಿದ್ದ ಮಹಿಳಾಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಪ್ರಸ್ತುತ ಮಠದ ಪೀಠಾಧ್ಯಾಕ್ಷರಾಗಿರುವ ಶ್ರೀಅಟವಿ ಶಿವಲಿಂಗಮಹಾಸ್ವಾಮೀಜಿ ಅವರು ಸಹ ಮಠದ ಪೀಠಾಧ್ಯಕ್ಷರಾದ ನಂತರ, ಮಠವನ್ನು ಹಂತ ಹಂತವಾಗಿ ಬೆಳೆಸಿ, ಮಕ್ಕಳಿಗೆ ಅಕ್ಷರ, ಅನ್ನ, ಆಶ್ರಯ ನೀಡಿ ಉತ್ತಮ ಪ್ರಜೆಗಳನ್ನು ರೂಪಿಸುತಿದ್ದಾರೆ. ಅಲ್ಲದೆ ಗೋಶಾಲೆಯ ಮೂಲಕ ಮೂಕ ಪ್ರಾಣಿಗಳ ಸೇವೆ ಮಾಡಿ,ಭಗವಂತನ ಸೇವೆಯಲ್ಲಿ ತೊಡಗಿದ್ದಾರೆ. ಅವರ ಎಲ್ಲಾ ಇಚ್ಚೆಗಳು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಜಾತ್ಯಾತೀತ ವ್ಯಕ್ತಿ.ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ.ನನ್ನಗೂ ಅನೇಕ ರೀತಿಯ ಸಹಾಯ ಮಾಡಿದ್ದಾರೆ.ಇಂತಹ ಶಾಸಕರು ಸಿಕ್ಕಿರುವುದು ನಿಮ್ಮೆಲ್ಲರ ಭಾಗ್ಯ ಎಂದ ಅವರು,ಮಹಿಳೆಯ ಎಲ್ಲಾ ರಂಗದಲ್ಲಿಯೂ ಮುಂದಿದ್ದರೂ ಆಕೆಯನ್ನು ಒಪ್ಪಿಕೊಳ್ಳಲು ಸಮಾಜ ಇಂದಿಗೂ ಹಿಂದೇಟು ಹಾಕುತ್ತದೆ. ಇಂದಿಗೂ ಆಕೆ ಎರಡನೇ ದರ್ಜೆ ಪ್ರಜೆಯಾಗಿಯೇ ನೋಡಲಾಗುತ್ತಿದೆ.ಇದು ತಪ್ಪಬೇಕು. ಗಂಡಿಗೆ ಸಮಾನವಾಗಿ ಹೆಚ್ಚಿಗೆ ಪ್ರತಿಭೆಗೂ ಬೆಲೆ ಸಿಗವಂತಾಗಬೇಕು ಎಂದು ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಪ್ರತಿಪಾದಿಸಿದರು.
ಬಸವಾದಿ ಶರಣರು ಈ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಸಂಸ್ಕೃತಿ,ಪರಂಪರೆಯನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಬೇಕಿದೆ.ಮೊಬೈಲ್,ಟಿ.ವಿ.ಗಳಿಂದ ಸಾಧ್ಯವಾದಷ್ಟು ದೂರ ಉಳಿಸಿ,ಶರಣ,ವಚನ ಸಂಸ್ಕೃತಿಯನ್ನು ಪರಿಚಯಿ ಸುವ ಕೆಲಸ ಮಾಡಬೇಕಿದೆ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ತಿಳಿಸಿದರು.
ಅಟವಿ ಶ್ರೀಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಮಹಾಸ್ವಾಮೀಜಿ ಮಾತನಾಡಿ,ಮಹಿಳೆಯ ಎಂಬುದು ಒಂದು ಶಕ್ತಿ.ತೊಟ್ಟಿಲು ತೂಗುವ ಕೈ ದೇಶ ಆಳಬಲ್ಲದು ಎಂಬುದನ್ನು ಅನೇಕ ಮಹಿಳೆಯರು ಸಾಭೀತು ಮಾಡಿ ತೋರಿಸಿದ್ದಾರೆ. ಒಂದು ಮನೆಯನ್ನು ಮುನ್ನೆಡೆಸುವ ಮಹಿಳೆ,ಹೊಲ ಗದ್ದೆಗಳಲ್ಲಿ ದುಡಿದು,ಸಂಸಾರದ ನೊಗ ಹೊತ್ತು ಗಂಡಿಗೆ ಸಮಾನವಾಗಿ ದುಡಿಯುತ್ತಿದ್ದಾರೆ.ಇವರ ಪಾತ್ರವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ.ಅವರನ್ನು ಗೌರವಿಸುವ ಕೆಲಸ ಮಾಡಬೇಕಿದೆ.ಇದರ ಭಾಗವಾಗಿಯೇ ಮಹಿಳಾ ಗೋಷ್ಠಿಯನ್ನು ಆಯೋಜಿಸಿ,ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ.ಬೆಳಗಿನ ಕಾರ್ಯಕ್ರಮಕ್ಕೆ ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಭೇಟಿ ನೀಡಿ, ವಸ್ತುಪ್ರದರ್ಶನ ವೀಕ್ಷಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ. ಹಾಗೆಯೇ ಸಚಿವರಾದ ಜೆ.ಸಿ.ಮಾಧುಸ್ವಾಮಿ ಸಹ ಭೇಟಿ ನೀಡಿ, ಶ್ರೀಮಠದ ಅಶೀರ್ವಾದ ಪಡೆದಿದ್ದಾರೆ.ಶುಕ್ರವಾರದಿಂದ ಶಾಲಾ ಮಕ್ಕಳು, ಮಹಿಳೆಯರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ, ವೀಕ್ಷಿಸಿ,ಮಾಹಿತಿ ಪಡೆದುಕೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ. ಮಠಕ್ಕೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ,ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯಸ್ವಾಮೀಜಿ,ಮತ್ತಿತರ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.