ದಲಿತರಿಗೆ ಪೂಜೆ ನಿರಾಕರಿಸಿದ ಮುಳಕಟ್ಟಮ್ಮ ದೇವಸ್ಥಾನದ ಅರ್ಚಕ
ನಿಟ್ಟೂರು ಗ್ರಾಮದ ಶ್ರೀ ಮುಳಕಟ್ಟಮ್ಮ ದೇವಾಲಯದಲ್ಲಿ ನಡೆದಿರುವ ಘಟನೆ
ಗುಬ್ಬಿ : ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬಂದಿದ್ದ ದಲಿತ ಕುಟುಂಬಕ್ಕೆ ಪೂಜೆ ನಿರಾಕರಿಸಿ ಪೂಜೆ ಸಾಮಾನುಗಳನ್ನು ವಾಪಸ್ ಕೊಟ್ಟಿರುವ ಅಮಾನವೀಯ ಘಟನೆಯೊಂದು ತಾಲೂಕಿನ ನಿಟ್ಟೂರು ಗ್ರಾಮದ ಶ್ರೀ ಮುಳಕಟ್ಟಮ್ಮ ದೇವಾಲಯದಲ್ಲಿ ನಡೆದಿದೆ.
ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ದಲಿತ ಕುಟುಂಬಕ್ಕೆ ದೇವಾಲಯದ ಅರ್ಚಕ ಶ್ರೀಧರ್ ದೇವಾಲಯದ ಒಳಗಡೆ ಯಾಕೆ ಬಂದಿರಿ, ಹೊರಗಡೆಯೇ ನಿಲ್ಲಿ ನಿಮಗೆ ಪೂಜೆ ತಾನೇ ಮಾಡುತ್ತೇನೆ. ಆದರೆ ನೀವು ದೇವಸ್ಥಾನದ ಹೊರಗಡೆ ಹೋಗಿ ಎಂದು ಆಕ್ರೋಶದಿಂದ ಹೇಳಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ವಾದ ವಿವಾದ ನಡೆದಿದ್ದು ಅರ್ಚಕರು ಪೂಜೆ ಮಾಡದೆ ನಿರಾಕರಿಸಿ ಪೂಜೆ ಸಾಮಾನು ವಾಪಸ್ಸು ಕೊಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ.
ನಂತರ ದೇವಾಲಯದ ಕಮಿಟಿ ಮತ್ತು ದಲಿತ ಭಕ್ತಾದಿಗಳ ನಡುವೆ ವಾದ ವಿವಾದ ನಡೆದಿರುವ ಘಟನೆಯು ನಡೆದಿದೆ.ಈ ಘಟನೆಯಿಂದ ನೊಂದ ಅಮಾಯಕ ದಲಿತ ಕುಟುಂಬವು ಡಿಎಸ್ಎಸ್ ಸಂಘಟನೆಯ ಪದಾಧಿಕಾರಿಗಳ ಜೊತೆಯಲ್ಲಿ ಗುಬ್ಬಿ ವೃತ್ತ ನಿರೀಕ್ಷಕ ಆರಕ್ಷಕರ ಕಚೇರಿಗೆ ದೂರು ಸಲ್ಲಿಸಲು ಬಂದಾಗ ವೃತ ಆರಕ್ಷಕರಾದ ನದಾಫ್ ಅವರ ಸಮ್ಮುಖದಲ್ಲಿ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳನ್ನು ಕಚೇರಿಗೆ ಕರೆಸಿ, ಘಟನೆಯ ಬಗ್ಗೆ ತೇಪೆ ಹಾಕುವ ಕೆಲಸವನ್ನು ಮಾಡಿ ನೊಂದ ದಲಿತ ಕುಟುಂಬವನ್ನು ಸಮಾಧಾನಪಡಿಸಿ ಸ್ಥಳದಿಂದ ಕಳಿಸಿದ್ದಾರೆ.
ಈ ಬೆಳವಣಿಗೆಯಿಂದ ದಲಿತರಿಗೆ ತಾಲೂಕಿನಲ್ಲಿ ನ್ಯಾಯ ಸಿಗದಂತ್ತಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಪೂರಕವೆಂಬಂತೆ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದ ಇಬ್ಬರು ದಲಿತ ಯುವಕರ ಜೋಡಿ ಕೊಲೆ ಪ್ರಕರಣ. ಪಟ್ಟಣದಲ್ಲಿ ದಲಿತ ಯುವಕನಿಗೆ ಅಮಾನವೀಯವಾಗಿ ಥಳಿಸಿ ಚಪ್ಪಲಿ ಹಾರ ಹಾಕಿದ ಘಟನೆ ಸೇರಿದಂತೆ ಇನ್ನೂ ಅನೇಕ ಘೋರ ಪ್ರಕರಣಗಳು ತಾಲೂಕಿನಲ್ಲಿ ನಡೆದಿದ್ದು, ಈ ಘಟನೆಗಳು ಮಾಸುವ ಮುನ್ನವೇ ಮತ್ತೊಮ್ಮೆ ಸಾಭೀತಾಗಿದ್ದು, ದಲಿತರ ಮೇಲೆ ನಡೆದಿರುವಂತಹ ಅಮಾನವೀಯ ಕೃತ್ಯಗಳ ಸಾಕ್ಷಿ ಎಂಬಂತಿವೆ. ಇಂತಹ ಅನ್ಯಾಯದ ಪ್ರಕರಣಗಳಲ್ಲಿ ಕೆಲವು ಡಿಎಸ್ಎಸ್ ಸಂಘದ ಪದಾಧಿಕಾರಿಗಳ ಹಸ್ತಕ್ಷೇಪವು ಕೂಡ ಬಹುಮುಖ್ಯ ಕಾರಣವಾಗಿದೆ. ಈ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಸ್ವಯಂ ಪ್ರಕರಣವನ್ನು ದಾಖಲು ಮಾಡಿಕೊಂಡು ನೊಂದ ದಲಿತರಿಗೆ ನ್ಯಾಯ ಒದಗಿಸಬೇಕಾಗಿದೆ.
ನಮ್ಮ ಕಚೇರಿಗೆ ಎರಡು ಕಡೆಯವರನ್ನು ಕರೆಸಿ, ಈ ರೀತಿ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದು , ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳ ಕಡೆಯಿಂದ ಹೇಳಿಕೆಯನ್ನು ಬರೆಹಿಸಿಕೊಳ್ಳಲಾಗಿದೆ. – ನದಾಫ್ ಸರ್ಕಲ್ ಇನ್ಸ್ ಪೆಕ್ಟರ್ ಗುಬ್ಬಿ.
ಈ ಘಟನೆಯ ಬಗ್ಗೆ ನಮಗೆ ಮಾಹಿತಿ ತಿಳಿದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ಹರಿದಾಡಿದ್ದರಿಂದ ಮಾಹಿತಿ ತಿಳಿದು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. – ರಾಮಣ್ಣ. ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗುಬ್ಬಿ.
ಈ ಘಟನೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ನಮ್ಮ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. ನಂತರ ವರದಿ ಪಡೆಯುತ್ತೇನೆ ಹಾಗೂ ಈಗಾಗಲೇ ವೃತ ಆರಕ್ಷಕರ ಕಚೇರಿಯಲ್ಲಿ ರಾಜೀ ಮಾಡಲಾಗಿದ್ದು ಘಟನೆ ನಡೆದ ದೇವಾಲಯದಲ್ಲಿ ಎಲ್ಲಾ ಸಾರ್ವಜನಿಕರಿಗೂ ಪ್ರವೇಶವಿದೆ ಎಂಬ ನಾಮಪಲಕವನ್ನು ಹಾಕಿಸಲಾಗುತ್ತದೆ. – ಆರತಿ. ಬಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು ಗುಬ್ಬಿ.