ಕೊರಟಗೆರೆ
ವಿದ್ಯುತ್ ಖಾಸಗಿಕರಣ, ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಿ ರೈತ ಸಂಘ ಪ್ರತಿಭಟನೆ
ಕೊರಟಗೆರೆ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿರುವುದನ್ನು ವಿರೋಧಿಸಿ ಮತ್ತು ಕೃಷಿ ಕ್ಷೇತ್ರದ ಉಳಿವಿಗಾಗಿ ಆಗ್ರಹಿಸಿ ಕೊರಟಗೆರೆ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನೆಡೆಸಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ತಹಸೀಲ್ದಾರ್ ನಾಹಿದಾ ಜಮ್ ಜಮ್ ರವರ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಅದ್ಯಕ್ಷ ರಂಗಹನುಮಯ್ಯ ಮಾತನಾಡಿ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಹುನ್ನಾರದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೆ ಸರಿಯಾಬೇಕು, ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ನೊಂದಾವಣೆಯಾಗಿರುವ,ಎಲ್ಲಾ ಪ್ರಕರಣಗಳಲ್ಲಿ ಟ್ರಾನ್ಸ್ ಫಾರಂನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಹಾಗೂ ಬಾಕಿ ಎಲ್ಲಾ ವಿದ್ಯುತ್ ಬಿಲ್ಲುಗಳನ್ನು ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಅಡಿಕೆ ಆಮದಿನ ಮೇಲೆ ಹೆಚ್ಚು ಸುಂಕ ವಿಧಿಸಿ, ಭೂತಾನ್ ಸೇರಿದಂತೆ ಬೇರೆ ಬೇರೆ ರಾಷ್ಟಗಳಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ ಕೇಂದ್ರ ಸರ್ಕಾರ ಮಾತು ಕೊಟ್ಟಂತೆ ರೈತರ ಎಲ್ಲ ಕೃಷಿ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ಖರೀದಿಸಲು ವರ್ಷ ಪೂರ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಎಂ.ಎಸ್.ಪಿ ಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಬೇಕು ಎಂದರು
ಹವಾಮಾನ ವೈಪರೀತ್ಯದಿಂದ ನಷ್ಟವಾಗಿರುವ ಬೆಳೆಗಳಿಗೆ ವಾಸ್ತವ ವೆಚ್ಚ ಆಧರಿಸಿ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕು ಮತ್ತು ಸಂಪೂರ್ಣವಾಗಿ ಬೆಳೆ ನಷ್ಟವಾಗಿರುವುದರಿಂದ ಎಲ್ಲ ರೈತರಿಗೂ ಕೂಡಲೇ ಬೆಳೆ ವಿಮೆ ಪಾವತಿಸಬೇಕು ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಪಾಷಾ,ಗೌರವಾಧ್ಯಕ್ಷ ನರಸಿಹ ಮೂರ್ತಿ,ಸಂಘಟನಾ ಕಾರ್ಯದರ್ಶಿ,ದೇವರಾಜು,ಉಪಾಧ್ಯಕ್ಷ ರಂಗಹನುಮಯ್ಯ ಕ ರ ವೇ ನಟರಾಜ್ ಮಾಜಿ ಪ ಪಂ ಉಪಾಧ್ಯಕ್ಷ ನಯಾಸ್, ದಲಿತ ಮುಖಂಡ ನಾಗರಾಜ್ ಸೇರಿದಂತೆ ರೈತ ಮುಖಂಡರುಗಳು ಹಾಜರಿದ್ದರು.