ನ್ಯಾಯಬೆಲೆ ಅಂಗಡಿ ಅಕ್ರಮಗಳ ವಿರುದ್ಧ ಕೆ.ಆರ್.ಎಸ್ ಪಕ್ಷದಿಂದ ಆಪರೇಷನ್ ವೀರಾಚಾರಿ ಕಾರ್ಯಾಚರಣೆ : ಎಸ್.ನಾಗರಾಜ್
ಕುಣಿಗಲ್ : ಕೆ.ಆರ್.ಎಸ್ ಪಾರ್ಟಿ ಕುಣಿಗಲ್ ಘಟಕದ ವತಿಯಿಂದ ತಾಲೂಕಿನಲ್ಲಿರುವ ಸುಮಾರು 117 ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮ, ಅನ್ಯಾಯ, ಹಾಗೂ ತೂಕದಲ್ಲಿ ಮೋಸ ,ಫಲಾನುಭವಿಗಳಿಂದ ಹಣ ಪಡೆಯುತ್ತಿರುವುದರ ವಿರುದ್ಧ ಆಪರೇಷನ್ ವೀರಾಚಾರಿ ಎಂಬ ಶೀರ್ಷಿಕೆಯಡಿ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದೆ ಎಂದು ಕೆ ಆರ್ ಎಸ್ ಪಕ್ಷದ
ತಾಲೂಕು ಕಾರ್ಯದರ್ಶಿ ಎಸ್ ನಾಗರಾಜ್ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲ ಘಟ್ಟ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ ಯವರು ತಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಅನ್ಯಾಯ ಅಕ್ರಮಗಳ ವಿರುದ್ಧ ಸತತವಾಗಿ ಹೋರಾಡಿ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದು ಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಸಾಲುಮರದ ವೀರಾಚಾರಿಯವರು ಇತ್ತೀಚಿಗೆ ಕೆಆರ್ಎಸ್ ಪಕ್ಷದ ಸದಸ್ಯತ್ವ ಪಡೆದುಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ದಾವಣಗೆರೆ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಎಂಬ ಭ್ರಷ್ಟ ಅಧಿಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕನಿಂದ ಹಣವನ್ನು ಪಡೆದು ಪರವಾನಿಗೆಯನ್ನು ಮತ್ತೆ ಅದೇ ವ್ಯಕ್ತಿಗೆ ನೀಡಿರುತ್ತಾರೆ ಈ ಹಿನ್ನೆಲೆಯಲ್ಲಿ
ವೀರಾಚಾರಿ ಯವರು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ವೀರಾಚಾರಿ ಅವರು ತಮ್ಮ ಗ್ರಾಮದ ಮರವೊಂದಕ್ಕೆ ನೇಣು ಹಾಕಿಕೊಂಡು ಸೆಪ್ಟೆಂಬರ್ 20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಅವರು ಪ್ರಸ್ತುತ ಮಂಟೇಸ್ವಾಮಿ ಎಂಬ ಭ್ರಷ್ಟ ಆಹಾರ ಇಲಾಖೆಯ ಜಂಟಿ ನಿರ್ದೇಶಕ ತುಮಕೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟಗಾರರಾಗಿದ್ದ ದಿವಂಗತ ವೀರಾಚಾರಿಯವರ ಸ್ಮರಣಾರ್ಥ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂಬ ಉದ್ದೇಶದಿಂದ ಕೆಆರ್ಎಸ್ ಪಾರ್ಟಿಯು ರಾಜ್ಯಾದ್ಯಂತ ಆಪರೇಷನ್ ವೀರಾಚಾರಿ ಎಂಬ ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಅದೇ ರೀತಿ ತಾಲೂಕಿನಾದ್ಯಂತ ಇರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಪರೇಷನ್ ವೀರಾಚಾರಿ ಎಂಬ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹತ್ತು ಹಲವಾರು ವಿಚಾರಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಶ್ರೀನಿವಾಸ್ ಎಸ್ ಟಿ, ಯುವ ಕಾರ್ಯದರ್ಶಿ ನಾಗೇಂದ್ರ, ಯುವ ಘಟಕದ ಅಧ್ಯಕ್ಷ ಮಹದೇವ್, ಸದಸ್ಯ ಯಶ್ವಂತ್ ಉಪಸ್ಥಿತರಿದ್ದರು