ತುಮಕೂರು ನಗರದಲ್ಲಿ ಭಾವೈಕ್ಯತೆಯ ಶಾಂತಿ ಕದಡಬೇಡಿ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್
ತುಮಕೂರು : ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ಹರಿದ ಬೆನ್ನಲ್ಲೇ ತುಮಕೂರು ನಗರದಲ್ಲಿಯೂ ಭಾವಚಿತ್ರವನ್ನು ಹರಿದು ಶಾಂತಿ ಕದಡುವ ಯತ್ನ ನಡೆದಿದೆ. ತುಮಕೂರು ನಗರದಲ್ಲಿ ದಶಕಗಳಿಂದ ನಾವೆಲ್ಲರೂ ಶಾಂತಿ ಸೌಹಾರ್ಧತೆಯಿಂದ ಬಾಳುತ್ತಿದ್ದೇವೆ. ತುಮಕೂರು ಎಂದರೆ ಶೈಕ್ಷಣಿಕವಾಗಿ, ಕೋಮು ಸಾಮರಸ್ಯಕ್ಕೆ ಹೆಸರಾದ ಊರು. ಇದರೊಂದಿಗೆ ಅಭಿವೃದ್ದಿಯ ವಿಚಾರದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಆದರೆ ಇತ್ತಿಚೆಗೆ ಇಂತಹ ಹಲವಾರು ಅಹಿತಕರ ಘಟನೆಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ಜೀವನದ ಮೇಲೆ ದುಷ್ಪರಿಣಾಮ ಬೀರಿ ನಗರದ ಅಭಿವೃದಿಗೆ ಹಿನ್ನಡೆಯುಂಟಾಗುವ ಸಂಭವವಿದ್ದು ಈ ತರಹದ ಪ್ರಕರಣ ನಡೆಯದಂತೆ ಎಚ್ಚರವಹಿಸಬೇಕು ಎಂದು ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ.
ಏನೇ ಸಮಸ್ಯೆಗಳಿದ್ದರೂ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು, ಅದು ಬಿಟ್ಟು ಹಿಂಸಾಚಾರ, ಕ್ರೌರ್ಯವೆಸಗಿ ಶಾಂತಿ ಕದಡುವ ಕೆಲಸ ಮಾಡಿದರೆ ಸಾರ್ವಜನಿಕರ ಆಸ್ತಿಗೆ ಆಗುವ ನಷ್ಟವೇ ಹೆಚ್ಚಾಗುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಯುಳ್ಳವರ ಸ್ವಾರ್ಥಕ್ಕೆ ಸಾರ್ವಜನಿಕರು ನೆಮ್ಮದಿಯಿಂದ ಬಾಳಲು ಸಾಧ್ಯವಾಗುವುದಿಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಅಂತಹವರ ಮೇಲೆ ಕಾನೂನುಕ್ರಮ ಜರುಗಿಸಿ ಎಂದು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.