ಭೂ ಹಗರಣದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಕೈವಾಡ : ಸಿಒಡಿ ತನಿಖೆಗೆ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಆಗ್ರಹ
ಗುಬ್ಬಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಗುಬ್ಬಿ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಶಾಮೀಲಾಗಿ ನಡೆಸಿರುವ ಭೂ ಹಗರಣದ ವಿಚಾರದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಕೈವಾಡವಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಗಂಭೀರ ಆರೋಪ ಮಾಡಿದರು.
ಗುಬ್ಬಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣದ ಸಂಬಂಧ ಪೊಲೀಸ್ ಇಲಾಖೆ ಅಧಿಕಾರಿಗಳು ಕೆಲವು ಶಾಸಕರ ಹಿಂಬಾಲಕರನ್ನು ವಶಕ್ಕೆ ಪಡೆದಿದ್ದು ಜೊತೆಗೆ ಶಾಸಕರೇ ಈ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿದ್ದು ಸಮರ್ಪಕವಾದ ಅಧಿಕಾರ ನಿರ್ವಹಿಸದೆ ಇರುವುದು ಅವರ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಶಾಮೀಲಾಗಿ ನಡೆಸಿರುವ ಬರೋಬ್ಬರಿ 450 ಎಕರೆ ಸರ್ಕಾರಿ ಜಾಗ ಗುಳುಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೂಡಲೇ ಸರ್ಕಾರ ಮತ್ತು ಕಂದಾಯ ಸಚಿವರು ಮಧ್ಯ ಪ್ರವೇಶ ಮಾಡಿ ಈ ಪ್ರಕರಣವನ್ನು ಸಿ.ಒ.ಡಿ.ತನಿಖೆಗೆ ವಹಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಿದರು.
ಭ್ರಷ್ಟಾಚಾರದ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿ ಬಹುದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಜಾಗವನ್ನು ಕಬಳಿಸಿದ್ದು ಸರ್ಕಾರಿ ದಾಖಲೆಗಳನ್ನು ತಿದ್ದಿ ಅನ್ಯ ಮಾರ್ಗದಿಂದ ಭೂಮಿ ಕಬಳಿಸಲು ಮುಂದಾಗಿದ್ದು ಒಂದೆಡೆಯಾದರೆ ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಜೊತೆ ಭೂ ಮಾಫಿಯಾದ ದೊಡ್ಡ ತಂಡವೇ ತಾಲ್ಲೂಕಿನಲ್ಲಿ ಬೇರೂರಿದ್ದು ಈ ಅಕ್ರಮ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿ.ಒ.ಡಿ.ತನಿಖೆಗೆ ಆದೇಶಿಸಿದರೆ ಈ ಅಕ್ರಮದ ನೈಜ ಚಿತ್ರಣ ಹೊರಬೀಳಲಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಬಹುದೊಡ್ಡ ಎಚ್ಎಎಲ್ ಘಟಕ ನಿರ್ಮಾಣದ ಬೆನ್ನಲ್ಲೇ ಭೂಮಿಗೆ ಬಂಗಾರದ ಬೆಲೆ ಬಂದ ಹಿನ್ನೆಲೆ ಸರ್ಕಾರಿ ಜಾಗವನ್ನು ಕಬಳಿಸಲು ಹುನ್ನಾರ ನಡೆದಿದೆ.ಭೂಮಾಫಿಯಾ ಕಣ್ಣು ತಾಲ್ಲೂಕಿನ ಜನತೆಯನ್ನು ನಿದ್ದೆ ಗೆಡಿಸಿದ್ದು ಈ ಅಕ್ರಮದಲ್ಲಿ ತಾಲ್ಲೂಕಿನ ಶಾಸಕರ ಜೊತೆಗೂಡಿ ಹಲವು ಪ್ರಮುಖರ ಹೆಸರುಗಳು ಕೇಳಿಬಂದಿದ್ದು ಬರೊಬ್ಬರಿ 450 ಎಕರೆ ಸರ್ಕಾರಿ ಜಾಗ ಲೂಟಿ ಮಾಡಿದವರು ಯಾರೇ ಆದರೂ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಅಕ್ರಮಕ್ಕೆ ನಾಂದಿ ಹಾಡಲು ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಮುಖಂಡರ ಸಲಹೆ ಪಡೆದು ಅವರೊಂದಿಗೆ ಚರ್ಚಿಸಿ ಬೃಹತ್ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಗುಬ್ಬಿ ತಾಲ್ಲೂಕು ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ.ಮಾಜಿ ಅಧ್ಯಕ್ಷ ಜಿ.ಡಿ ಸುರೇಶ್ ಗೌಡ,ಮುಖಂಡರಾದ ಶಿವಲಿಂಗಯ್ಯ,ಗಂಗಾಧರ್, ಫಿರ್ದೋಸ್ ಆಲಿ,ಗಿರೀಶ್,ಗಳಗಾ ನಾಗರಾಜು,ಗೋಪಾಲ್ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.