ಹಾವೇರಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ಪ್ರತಿಭಟನೆ, ಕಠಿಣ ಕ್ರಮಕ್ಕೆ ಒತ್ತಾಯ
ತುಮಕೂರು : ಹಾವೇರಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಹಾಗೂ ಹಲ್ಲೆ ನಡೆಸಿದವರ ಮೇಲೆ ಕಠಿಣ
ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ನಗರದ ಎಲ್ಲಾ ಪತ್ರಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತರನ್ನುದ್ಧೇಶಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಹಾವೇರಿ ಜಿಲ್ಲೆಯ ಖಾಸಗಿ ವಾಹಿನಿಯ ವರದಿಗಾರರಾದ ವೀರಯ್ಯ ಹಿರೇಮಠ, ಶಿವು ಮಡಿವಾಳರ್ ಹಾಗೂ ಕ್ಯಾಮೆರಾಮೆನ್ ಪ್ರಕಾಶ್ ಮುಳ್ಳಳ್ಳಿ ಅವರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು.
ಈ ಘಟನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸುತ್ತದೆ.
ರೈತಪರ ಹೋರಾಟರ್ಗಾತಿಯ ಹೆಸರಿನ ಮಂಜುಳಾ ಪೂಜಾರ್ ಅಸಲಿ ಮುಖವಾಡವನ್ನು ಸುದ್ದಿ
ವಾಹಿನಿ ಚುಟುಕು ಕಾರ್ಯಚರಣೆ ಮೂಲಕ ಬಯಲು ಮಾಡಿದ್ದರ ಹಿನ್ನೆಲೆಯಲ್ಲಿ ಜು.2ರಂದು
ಶನಿವಾರ ಮಧ್ಯಾಹ್ನ ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಮಂಜುಳಾ ಪೂಜಾರ್ ಹಾಗೂ
ಅವರ ಸಹಚರರು ಸುದ್ದಿಗೋಷ್ಠಿ ನಡೆಸಿ ಹೊರ ಬರುತ್ತಿದ್ದಂತೆ ಏಕಾಏಕಿ ಖಾಸಗಿ ಸುದ್ದಿ ವಾಹಿನಿಯ
ಸಿಬ್ಬಂದಿಯ ಮೇಲೆ ಹಾಡಹಗಲೇ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ
ನಡೆದಿರುವುದು ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ ಎಂಬುದು ಸಾಬೀತಾಗಿದೆ ಎಂದರು.
ಮಾಧ್ಯಮಗಳು ಸ್ವತಂತ್ರವಾಗಿ ಪತ್ರಿಕಾ ವೃತ್ತಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಆದ್ದರಿಂದ
ಈ ಘಟನೆ ಕುರಿತು ರಾಜ್ಯ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ
ಒತ್ತಾಯಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್ ಮಾತನಾಡಿ, ರಾಜ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜು ಮಾತನಾಡಿ, ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು, ಸಮಾಜದ ನಾಲ್ಕನೇ ಅಂಗ ಎಂದು ಹೇಳುತ್ತಾರೆಯೇ ವಿನಃ ಸೂಕ್ತ ರಕ್ಷಣೆ ನೀಡಿ, ಹಾವೇರಿ ಜಿಲ್ಲೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವವರನ್ನು ಗಡಿಪಾರು ಮಾಡಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಶಿವಣ್ಣ ಮಾತನಾಡಿ, ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಿ.ಸಿ.ಶೈಲಾನಾಗರಾಜ್, ಪತ್ರಕರ್ತರಾದ ಪುರುಷೋತ್ತಮ್ ಮೊದಲಿಯಾರ್, ಮಧು ಇಂಗಳದಾಳ್ ಮಾತನಾಡಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಎಲ್ಲಾ ಪತ್ರಕರ್ತರು ಭಾಗವಹಿಸಿದ್ದರು.