ದುರ್ಬಲರ ಏಳ್ಗೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಶ್ರಮ : ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ
ಮಧುಗಿರಿ : ಸಮಾಜದ ಅರ್ಥಿಕ,ಸಾಮಾಜಿಕ ಅಸಮತೋಲನವನ್ನು ಸರಿದೂಗಿಸಿ ಎಲ್ಲರೂ ಒಂದೇ ಎಂದು ಸಂತಸದಿಂದ ಜೀವನ ಕ್ರಮ ನಿರ್ವಹಿಸಲು ಶ್ರೀ ಕ್ಷೇತ್ರದಿಂದ ಸ್ವ ಸಹಾಯ ಸಂಘ ಸ್ಥಾಪನೆಯಾಗಿದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಡಿಸಿ ಟ್ರಸ್ಟ್ ತುಮಕೂರು ಜಿಲ್ಲೆ-2 ಇವರ ವತಿಯಿಂದ ಆಯೋಜಿಸಿದ್ದ ಸ್ವ ಉದ್ಯೋಗ ಮೇಳ ಮತ್ತು ಸಾಧನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ಯಾರು ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡು ದೇವರನ್ನು ಸ್ಮರಿಸುತ್ತಾರೋ ಅಂತವರಿಗೆ ಭಗವಂತನ ಆಶೀರ್ವಾದ ಸದಾ ದೊರೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮಾಂತರ ಪ್ರದೇಶದ ದುರ್ಬಲರ ಏಳಿಗೆಗೆ ದುಡಿಮೆಯ ಪ್ರಯೋಜನದ ಜೊತೆಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾನ್ನಾಗಿ ಮಾಡುವ ಉದ್ದೇಶ ಹೊಂದಿದೆ ಎಂದರು. ದುಡಿಮೆಯ ಸಂಪತ್ತು ಹಾಳಾಗಬಾರದು ಎಂಬ ಸದುದ್ದೇಶದಿಂದ ಉಳಿತಾಯದ ಬಗ್ಗೆ ಜನಜಾಗೃತಿ ಮಾಡಲಾಗುತ್ತಿದ್ದು, ಸಂಸಾರದಲ್ಲಿ ಎಲ್ಲರೂ ದುಡಿಮೆ ಮಾಡಿದಾಗ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರದ್ದೂ ಎಂಬುದೇ ಸಂಸ್ಥೆಯ ಉದ್ದೇಶ. ಸ್ವ-ಸಹಾಯ ಸಂಘ ಎಂದರೆ ನಮಗೆ ನಾವೇ ಸಹಾಯ ಮಾಡಿಕೋಳ್ಳುವುದು ಎಂದರ್ಥ ಎಂದ ಅವರು, ಸರ್ಕಾರದ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ದೊರೆಯಬೇಕೆಂಬ ಉದ್ದೇಶದಿಂದ 326 ಸೇವಾ ಕೇಂದ್ರಗಳನ್ನು ತೆರೆದು ಸರ್ಕಾರದ ಎಲ್ಲ ಮಾಹಿತಿ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ 30,000ಕ್ಕೂ ಅಧಿಕ ಕ್ರಿಯಾಶೀಲ ಸಂಘಗಳಿದ್ದು, 267 ಕೋಟಿ ಹಣ ಉಳಿತಾಯ ಮಾಡಲಾಗಿದೆ. 1400 ಕೋಟಿ ವ್ಯವಹಾರ ಮಾಡಲಾಗಿದ್ದು, ಇದರ ಉದ್ದೇಶ ಮಹಿಳೆಯರು ಸಬಲೀಕರಣವಾಗಬೇಕು ಎಂಬುದೇ ಆಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಅರಗಜ್ಞಾನೇಂದ್ರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ 400 ಕ್ಕೂ ಅಧಿಕ ಕೆರೆಗಳ ಅಭಿವೃದ್ಧಿ ಪಡಿಸಿದ್ದು, ಆರ್ಥಿಕ ಶಿಸ್ತು, ಸದೃಢ ಸಮಾಜ ನಿರ್ಮಾಣಕ್ಕೆ ಪಣತೊಟ್ಟು, ಮೌನಕ್ರಾಂತಿ ಮೂಲಕ ಸಮಾಜವನ್ನು ಕಟ್ಟುತ್ತಿರುವುದು ಸಂತಸದ ವಿಚಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ಜೊತೆ ಧರ್ಮಸ್ಥಳ ಸಂಸ್ಥೆಯೂ ಕೈ ಜೋಡಿಸಿದರೆ ಉಪಯುಕ್ತವಾಗುತ್ತದೆ. ಬರಪೀಡಿತ ಪ್ರದೇಶವಾದ ಈ ಭಾಗದಲ್ಲಿ ಶೇಕಡ 100ರಷ್ಟು ಸಾಲ ವಸೂಲಾತಿ ಆಗುತ್ತಿರುವುದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 1982 ರಲ್ಲಿ ಧರ್ಮಸ್ಥಳದಲ್ಲಿ ಕೇವಲ ಎರಡು ಹಳ್ಳಿಗಳಿಂದ ಪ್ರಾರಂಭವಾದ ಸಣ್ಣ ಪ್ರಯತ್ನ ಇಂದು ಆಂದೋಲನ ರೂಪ ತಾಳಿದೆ. ರಾಜ್ಯದಲ್ಲಿ 6.50 ಕೋಟಿ ಜನಸಂಖ್ಯೆ ಇದ್ದು ಪೂಜ್ಯ ಹೆಗ್ಗಡೆಯವರು ಗ್ರಾಮಾಭಿವೃದ್ದಿ ಮೂಲಕ 2.5 ಕೋಟಿ ಜನರ ಮನಸ್ಸು ಗೆದ್ದಿದ್ದಾರೆ ಎಂದ ಅವರು, ಪೂಜ್ಯರ ಸೇವೆ ಗುರುತಿಸಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು. ಅತಿ ಹೆಚ್ಚು ಬಡತನವಿರುವ ಈ ಭಾಗದಲ್ಲಿ ಜನರು ಮಳೆಯಾಧಾರಿತ ಕೃಷಿ ನಂಬಿ ಜೀವನ ಮಾಡುತ್ತಿದ್ದು, ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿದ್ದೇ ಆದಲ್ಲಿ ನಾವು ನಿಮಗೆ ಬಂಗಾರದ ಬೆಳೆ ಬೆಳೆದು ಕೊಡುತ್ತೇವೆ ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ತಾಲೂಕು ಬರ ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಈ ಭಾಗದ ಜನರಿಗೆ ಕೈಗಾರಿಕೆ, ನೀರಾವರಿ ಹಾಗೂ ಗಣಿಗಾರಿಕೆಗಳಿಲ್ಲದೆ ಜನರು ಜೀವನ ನಿರ್ವಹಣೆಗೆ ತತ್ತರಿಸುತ್ತಿದೆ. ಇದಕ್ಕೆ ಉದ್ಯೋಗ ನೀಡುವ ಕೆಲಸವಾಗಬೇಕಾಗಿದೆ ಎಂದರು
ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ ಪೂಜ್ಯರ ಕಾರ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಯುವಕರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿರುವ ಹೆಗಡೆಯವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ, ಪುರಸಭಾ ಅಧ್ಯಕ್ಷ ತಿಮ್ಮರಾಜು, ಧರ್ಮಸ್ಥಳ ಗ್ರಾಂಮೀಣಾಭಿವೃದ್ದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಮನೋಹರ್, ಪ್ರಾದೇಶಿಕ ನಿರ್ಧೇಶಕ ಎಂ.ಶೀನಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ರಾಮಚಂದ್ರ ಗುಪ್ತ, ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾಧಿಕಾರಿ ದಿನೇಶ್ ಕುಮಾರ್, ಜನಮುಖಿ ಸಂಸ್ಥೆ ಅಧ್ಯಕ್ಷ ಎಲ್.ಸಿ.ನಾಗರಾಜು, ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಇದ್ದರು.