ಕುಣಿಗಲ್
ಕೆ.ಎನ್.ರಾಜಣ್ಣ ಹೇಳಿಕೆ ಖಂಡಿಸಿ ಕುಣಿಗಲ್ ನಲ್ಲಿ ಜೆಡಿಎಸ್ ಪ್ರತಿಭಟನೆ : ಕಾಂಗ್ರೆಸ್ ಪಕ್ಷದಿಂದ ಕೆ.ಎನ್.ಆರ್ ಉಚ್ಚಾಟನೆಗೆ ಡಿ.ನಾಗರಾಜಯ್ಯ ಆಗ್ರಹ
ಕುಣಿಗಲ್ : ರಾಷ್ಟ್ರದ ಮಾಜಿ ಪ್ರಧಾನಿ ದೇವೇಗೌಡ ಅವರ ವಿರುದ್ದ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿ ತಾಲೂಕು ಜೆಡಿಎಸ್ ವತಿಯಿಂದ ಪಟ್ಟಣದ ಎನ್.ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ರಾಜಣ್ಣ ಅವರ ಅಣಕು ಶವಯಾತ್ರೆ , ಪ್ರತಿಕೃತಿ ದಹನ ಮಾಡಿ ವಿರೋಧ ವ್ಯಕ್ತಪಡಿಸಿದರು.
ಮಧುಗಿರಿ ತಾಲ್ಲೂಕಿನ ಸಮಾರಂಭವೊಂದರಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಹೆಚ್.ಡಿ.ದೇವೇಗೌಡ ಅವರನ್ನು ಇಬ್ಬರು ಒತ್ತಿಕೊಂಡು ಹೊಗುತ್ತಿದ್ದಾರೆ, ನಾಲ್ಕು ಮಂದಿ ಹೊತ್ತಿಕೊಂಡು ಹೊಗುವ ಕಾಲ ಶೀಘ್ರದಲ್ಲೇ ಬರುತ್ತದೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದನ್ನು ಖಂಡಿಸಿ ಮಾಜಿ ಸಚಿವ ಡಿ.ನಾಗರಾಜಯ್ಯ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜಣ್ಣ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ ರಾಜಣ್ಣ ಅವರು ಮಾಜಿ ಪ್ರಧಾನಿ ಅವರ ಹಿರಿತದ ಬಗ್ಗೆ ಯೋಚನೆ ಮಾಡಿ ಮಾತನಾಡಬೇಕಿತ್ತು, ಹಳ್ಳಿಗಾಡಿನಲ್ಲಿ ಜನಿಸಿದ ದೇವೇಗೌಡರು ಶಾಸಕರಾಗಿ ಸಂಸದರಾಗಿ, ರಾಜ್ಯದ ಮುಖ್ಯ ಮಂತ್ರಿಯಾಗಿ ಬಳಿಕ ದೇಶದ ಪ್ರಧಾನಿಯಾಗಿ, ರಾಜ್ಯಕ್ಕೆ ಹಾಗೂ ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಅವರ ಅಧಿಕಾರದ ಅವಧಿಯಲ್ಲಿ ಎಲ್ಲಾ ಸಮುದಾಯದ ಅಭಿವೃದ್ದಿಗೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಅಂತಹ ಮಹಾನ್ ನಾಯಕರ ವಿರುದ್ದ ಮಾತನಾಡಬೇಕಾದರೆ ಯೋಚಿಸಿ ಮಾತನಾಡಬೇಕಿತ್ತು. ಇದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ ಎಂದು ವಾಗ್ದಾಳಿ ನಡೆಸಿದರು.
ಉಚ್ಚಾಟನೆಗೆ ಆಗ್ರಹ : ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿ, ಕಣ್ಣೀರು ಹೊರೆಸುವಂತಹ ಕೆಲಸ ಮಾಡಬಾರದು, ಇದನ್ನು ಒಪ್ಪಲು ಸಾಧ್ಯವಿಲ್ಲ, ಅವರನ್ನು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ನಾಗರಾಜಯ್ಯ ಒತ್ತಾಯಿಸಿದರು.
ಮಧುಗಿರಿ ತಾಲ್ಲೂಕಿನ ಜನ ಸೋಲಿಸಿ : ದೇವೇಗೌಡರಿಗೆ ಅಪಮಾನ ಮಾಡಿರುವ ಮಾಜಿ ಶಾಸಕ ರಾಜಣ್ಣ ಅವರನ್ನು ಮಧುಗಿರಿ ಕ್ಷೇತ್ರದ ಮತದಾರರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಉತ್ತರ ನೀಡಬೇಕೆಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಕೆ.ಎಲ್ ಹರೀಶ್, ಗ್ರಾ.ಪಂ ಅಧ್ಯಕ್ಷ ಎಡಿಯೂರು ದೀಪು, ಜೆಡಿಎಸ್ ವಕ್ತಾರ ಹಾಗೂ ಗ್ರಾಪಂ ಸದಸ್ಯ ತರಿಕೆರೆ ಪ್ರಕಾಶ್, ತಾಪಂ ಮಾಜಿ ಸದಸ್ಯ ಜಿ ಟಿ ಕೃಷ್ಣಪ್ಪ ಒಳಗೊಂಡಂತೆ ಅನೇಕ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಜೆಡಿಎಸ್ ಕಾರ್ಯಕರ್ತರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ವರದಿ: ರೇಣುಕ ಪ್ರಸಾದ್