ತ್ಯಾಜ್ಯ ವಿಲೇವಾರಿ ಘಟಕವಾದ ರಾಷ್ಟ್ರೀಯ ಹೆದ್ದಾರಿ ರಸ್ತೆ…!
ತ್ಯಾಜ್ಯಕ್ಕೆ ಹಾಜರಾಗುವ ಯಮ ಸ್ವರೂಪಿ ನಾಯಿಗಳ ಹಿಂಡು
ಗುಬ್ಬಿ : ಪಟ್ಟಣದ ಗಡಿ ದಾಟಿದ ತಕ್ಷಣ ಹೇರೂರು ಗ್ರಾಮ ಆರಂಭಕ್ಕೆ ಮುನ್ನ ಗ್ರಾ.ಪಂ.ಕಚೇರಿಗೆ ಹೊಂದಿಕೊಂಡತ್ತಿರುವ ರಾ.ಹೆ.206 ಬದಿ ಕಸ ವಿಲೇವಾರಿ ಘಟಕವಾಗಿ ಮಾರ್ಪಟ್ಟು ನಿತ್ಯ ರಾಶಿ ರಾಶಿ ತ್ಯಾಜ್ಯ ಶೇಖರಣೆ ಆಗುತ್ತಿರುವುದು ಕಂಡು ಬಂದಿದೆ.
ಮದುವೆ ಮಂಟಪಗಳ ಊಟದೆಲೆ, ಪ್ಲಾಸ್ಟಿಕ್ ಲೋಟ ಸೇರಿದಂತೆ ಉಳಿದ ಅನ್ನ ಸಾಂಬಾರ್ ಕೂಡಾ ರಸ್ತೆ ಬದಿಯಲ್ಲಿ ತಂದು ಬಿಸಾಡಲಾಗಿದ್ದು ವಾಹನ ಸವಾರರು ಮೂಗು ಹಿಡಿದು ಇಲ್ಲಿ ಸಂಚರಿಸುವ ದುಸ್ಥಿತಿ ಬಂದೊದಗಿದೆ. ಈ ಅವ್ಯವಸ್ಥೆಯ ತಡೆಯಲು ಯಾರು ಜವಾಬ್ದಾರಿ ಹೊರುತ್ತಾರೆ ಎನ್ನುವುದೇ ದೊಡ್ಡ ಚರ್ಚೆಯಾಗಿದೆ.
ಕೋಳಿ ತ್ಯಾಜ್ಯಕ್ಕೆ ನಾಯಿಗಳ ಹಿಂಡು:-
ಪಟ್ಟಣದ ಗಡಿ ದಾಟಿದ ತಕ್ಷಣ ಎದುರಾಗುವ ಒಂದು ಚಿಕ್ಕ ಸೇತುವೆ ಆಜುಬಾಜು ಕಸದ ರಾಶಿ ತ್ಯಾಜ್ಯ ವಿಲೇವಾರಿ ಘಟಕವೇ ಎಂದು ಅಚ್ಚರಿ ಮೂಡಿಸುತ್ತದೆ. ಹಳೆ ಮನೆ ಮಣ್ಣು ಕಸ, ಮದುವೆಮನೆ ತ್ಯಾಜ್ಯ ಸೇರಿದಂತೆ ನಿತ್ಯ ಕೋಳಿ ತ್ಯಾಜ್ಯ ಚೀಲದ ಸಹಿತ ಕಾಣುತ್ತದೆ. ಕೋಳಿ ತ್ಯಾಜ್ಯಕ್ಕೆ ಹಾಜರಾಗುವ ನಾಯಿಗಳ ಹಿಂಡು ಬೈಕ್ ಸವಾರರಿಗೆ ಯಮ ಸ್ವರೂಪಿಗಳಾಗಿವೆ. ಮೊದಲೇ ಚಿಕ್ಕದಾದ ಈ ರಸ್ತೆ ಹೆದ್ದಾರಿ ಪ್ರಾಧಿಕಾರಕ್ಕೂ ಬೇಡವಾಗಿದೆ. ನಾಯಿಗಳ ಕಾಟಕ್ಕೆ ದ್ವಿಚಕ್ರ ವಾಹನ ಉರುಳಿ ಬಿದ್ದ ಉದಾಹರಣೆ ಸಾಕಷ್ಟಿವೆ.
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? :-
ಕಸ ವಿಲೇವಾರಿ ಬಗ್ಗೆ ಆಕ್ಷೇಪ ಮಾಡುವವರು ಯಾರು ಎಂಬ ಚರ್ಚೆ ನಡೆದಿದೆ. ಸ್ಥಳೀಯ ಗ್ರಾಮ ಪಂಚಾಯ್ತಿ ಈ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ ಎನ್ನುತ್ತಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಈ ರಸ್ತೆಯೂ ಬೇಡ, ಅಲ್ಲಿನ ನಿರ್ವಹಣೆಯೂ ಬೇಕಿಲ್ಲ. ಪಟ್ಟಣ ಪಂಚಾಯಿತಿಗೆ ಅದರ ವ್ಯಾಪ್ತಿಯಲ್ಲ ಅನ್ನುವ ಸಮಾಧಾನ. ಹೀಗೆ ಇದರ ಜವಾಬ್ದಾರಿ ಹೊರುವವರು ಯಾರು, ಬೆಕ್ಕಿಗೆ ಗಂಟೆ ಕಟ್ಟುವವರು ಯಾರೂ ಇಲ್ಲದಿರುವ ಕಾರಣ ಕಸ ನಿತ್ಯ ಬೀಳುತ್ತಿವೆ. ಕೆಟ್ಟ ವಾಸನೆ ಈಗಾಗಲೇ ಇಲ್ಲಿ ಸಾಂಕ್ರಾಮಿಕ ರೋಗದ ಉಗಮಸ್ಥಾನವಾಗಲಿದೆ ಎನ್ನುವ ಮಾತು ಸ್ಥಳೀಯರೇ ಆಡುತ್ತಾರೆ.
ಈ ಕಸ ಗುಬ್ಬಿ ಪಟ್ಟಣದಿಂದಲೇ ಬರುತ್ತಿದೆ ಎಂದು ಹೇರೂರು ಗ್ರಾಮಸ್ಥರು ದೂರುತ್ತಾರೆ. ಕತ್ತಲಾದ ಬಳಿಕ ರಸ್ತೆ ಬದಿ ಬಂದು ಕ್ಷಣಾರ್ಧದಲ್ಲಿ ಕೋಳಿ ತ್ಯಾಜ್ಯ ಬಿಸಾಕುತ್ತಾರೆ. ಟ್ರಾಕ್ಟರ್ ಮೂಲಕವೂ ಕಸ ಇಲ್ಲಿ ಡೆಂಪ್ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಪಟ್ಟಣ ಪಂಚಾಯಿತಿ ಹಾಗೂ ಹೆದ್ದಾರಿ ಪ್ರಾಧಿಕಾರ ಸಹಕಾರ ನೀಡಿದಲ್ಲಿ ಹೇರೂರು ಗ್ರಾಪಂ ಕೆಲಸ ಮಾಡಬಹುದಾಗಿದೆ. ಒಗ್ಗೂಡಿ ಕಸ ವಿಲೇವಾರಿ ತಡೆಯಬೇಕಿದೆ ಎಂದು ಪರಿಸರ ಪ್ರೇಮಿಗಳ ಸಲಹೆಯಾಗಿದೆ.
ವರದಿ:- ದೇವರಾಜು. ಮಡೇನಹಳ್ಳಿ