ತುಮಕೂರು : ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕದೇ, ಅಡ್ಡಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮನೆಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ನೇತೃತ್ವದಲ್ಲಿ ಮುಖಂಡರಾದ ಬೆಳ್ಳಿ ಲೋಕೇಶ್, ದೇವರಾಜು, ಕೃಷ್ಣಮೂರ್ತಿ, ಪಾಲಿಕೆ ಸದಸ್ಯ ಹೆಚ್.ಡಿ.ಕೆ.ಮಂಜುನಾಥ್, ತಹೇರಾ ಹುನ್ನೀಸಾ, ಸೇರಿದಂತೆ ನೂರಾರು ಕಾರ್ಯಕರ್ತರು ಶಾಸಕ ಎಸ್.ಆರ್.ಶ್ರೀನಿವಾಸ್ ಮನೆಗೆ ಮುತ್ತಿಗೆ ಹಾಕಿದರು.
ಜೆಡಿಎಸ್ ಕಚೇರಿಯಲ್ಲಿ ಸಭೆ ಸೇರಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕದೇ, ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪಕ್ಷದ್ರೋಹ ಎಸಗಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ರಾಜಕಾರಣ ಮಾಡುವಂತೆ ಆಗ್ರಹಿಸಲು ನಿರ್ಧರಿಸಿದ ನಂತರ ಶಾಸಕರ ಮನೆಗೆ ಮುತ್ತಿಗೆ ಹಾಕಿದರು.
ಜೆಡಿಎಸ್ ಕಾರ್ಯಕರ್ತರನ್ನು ಸ್ವಾಗತಿಸಲು ನಿಂತ ಶಾಸಕ :-
ಜೆಡಿಎಸ್ ಮುಖಂಡರು ಹಾಗೂ ಪದಾಧಿಕಾರಿಗಳು ಮುತ್ತಿಗೆ ಹಾಕುವ ವಿಚಾರ ತಿಳಿದ ಶಾಸಕ ಎಸ್.ಆರ್.ಶ್ರೀನಿವಾಸ್ ಬೆಂಬಲಿಗರೊಂದಿಗೆ ಬೀದಿಗೆ ಇಳಿದು, ಕಾಯುತ್ತಿದ್ದರು, ಈ ವೇಳೆ ವಾಸಣ್ಣ ತೊಲಗಲಿ ಎಂದು ಧಿಕ್ಕಾರ ಕೂಗುತ್ತ ಬಂದ ಕಾರ್ಯಕರ್ತರಿಗೆ ಪ್ರತಿಯಾಗಿ ಎಸ್.ಆರ್.ಶ್ರೀನಿವಾಸ್ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ದಿಕ್ಕಾರ ಕೂಗಿದರು.
ಈ ವೇಳೆ ಉಂಟಾದ ಗೊಂದಲದಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು, ಜೆಡಿಎಸ್ ಕಾರ್ಯಕರ್ತರ ಮಧ್ಯೆ ನುಗ್ಗಿದ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಬೆಂಬಲಿಗರೊಂದಿಗೆ ವಾಗ್ವಾದ ನಡೆಯಿತು.
ಎರಡು ಕಡೆ ಯವರನ್ನು ನಿಯಂತ್ರಿಸಲು ಸರ್ಕಲ್ ಇನ್ ಸ್ಪೆಕ್ಟರ್ ನವೀನ್, ಇನ್ ಸ್ಪೆಕ್ಟರ್ ಗಳಾದ ನವೀನ್, ಮಂಜುನಾಥ್, ವಿದ್ಯಾಶ್ರೀ ಪರದಾಡಿದರು, ಪಟ್ಟು ಸಡಿಲಿಸದ ಜೆಡಿಎಸ್ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಕುಳಿತರು.
ಜೆಡಿಎಸ್ ಮುಖಂಡರ ಪ್ರತಿಭಟನೆಯನ್ನು ವಿರೋಧಿಸಿದ ಶಾಸಕ ಶ್ರೀನಿವಾಸ್ ಬೆಂಬಲಿಗರು, ನಾವು ಶ್ರೀನಿವಾಸ್ ಅವರಿಗೆ ಮತಹಾಕಿರುವವರು, ನಮ್ಮ ಶಾಸಕರನ್ನು ಪ್ರಶ್ನಿಸುವ ಅಧಿಕಾರ ಬೇರೆಯವರಿಗೆ ಇಲ್ಲ, ಪಕ್ಷಕ್ಕಾಗಿ ಹೋರಾಡಿದವರು ನಾವು, ತಾಲ್ಲೂಕಿನಲ್ಲಿ ಪಕ್ಷಕ್ಕೆ ಅಧಿಕಾರಕ್ಕೆ ತಂದೆವು ಆದರೆ ಈಗ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ, ಕುಮಾರಸ್ವಾಮಿ ಅವರು ನೀಚತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮೇಲೆ ಗೂಬೆ ಕುಳಿಸಲು ಮನೆ ಮುಂದೆ ಪ್ರತಿಭಟನೆ ಮಾಡಲು ಕಳುಹಿಸಿದ್ದಾರೆ, ಪ್ರತಿಭಟನೆ ವಿಚಾರ ಗೊತ್ತಾಗಿ, ಗುಬ್ಬಿಯಿಂದ ಶಾಸಕರ ಬೆಂಬಲಿಗರು ಹಾಗೂ ಅಭಿಮಾನಿಗಳು ಬಂದಿದ್ದೇವೆ, ತಾಕತ್ತಿದ್ದರೆ ಗುಬ್ಬಿಗೆ ಬಂದು ಪ್ರತಿಭಟನೆ ಮಾಡಲಿ ಎಂದು ಪುರಸಭೆ ಸದಸ್ಯ ಮೋಹನ್ ಸವಾಲು ಹಾಕಿದರು.
ನ್ಯಾಯ ಕೇಳಲು ಬಂದರೆ ಹಲ್ಲೆ :-
ಶಾಸಕರ ಅಡ್ಡಮತದಾನದ ಬಗ್ಗೆ ನ್ಯಾಯ ಕೇಳಲು ಬಂದ ಜೆಡಿಎಸ್ ಮುಖಂಡರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಾರೆ, ಪ್ರಜಾ ಪ್ರಭುತ್ವದಲ್ಲಿ ನ್ಯಾಯ ಕೇಳುವ ಹಕ್ಕು ಎಲ್ಲರಿಗೂ ಇದೆ, ನೈತಿಕತೆ ಇಲ್ಲದೇ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ಆರೋಪಿಸಿದರು.
ಪಕ್ಷದಿಂದ ಗೆದ್ದಿದ್ದಾರೆ ನಮ್ಮ ಪಕ್ಷದ ಮುಖಂಡ ಮನೆಗೆ ಬಂದರೆ ಜೆಡಿಎಸ್ ನಗರಸಭಾ ಸದಸ್ಯ ರವಿ ಅವರ ಕೊರಳ ಪಟ್ಟಿ ಹಿಡಿದು ಹಲ್ಲೆ ನಡೆಸಲು ಮುಂದಾದರು, ಪಕ್ಷದ ಸರ್ವೋಚ್ಛ ನಾಯಕರಾದ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಏಕ ವಚನದಲ್ಲಿ ನಿಂದಿಸುತ್ತಾರೆ, ಇವರಿಗೆ ತಾಕತ್ತಿದ್ದರೆ ರಾಜೀನಾಮೆ ಸಲ್ಲಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ಪಕ್ಷದ್ರೋಹ ಬಗೆದಿಲ್ಲ ಶ್ರೀನಿವಾಸ್ :-
ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್ ನಾನು ಪಕ್ಷದ್ರೋಹ ಬಗೆದಿಲ್ಲ.ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ದೇನೆ. ಅದನ್ನು ಎಂಜೆಟ್ ಆಗಿದ್ದ ಹೆಚ್.ಡಿ.ರೇವಣ್ಣ ಅವರಿಗೂ ತೋರಿಸಿದ್ದೇನೆ.ಆದರೆ ಒಂದರ ಹಿಂದೆ ಒಂದರಂತೆ ತಪ್ಪು ಸಂದೇಶಗಳನ್ನು ನೀಡಿ,ನನ್ನ ವರ್ಚ್ಚಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.ಹೆಚ್.ಡಿ.ಕುಮಾರಸ್ವಾಮಿಗೆ ಪಕ್ಷ ನಡೆಸುವ ಶಕ್ತಿ ಇಲ್ಲ. ಅವನಿಗೆ ಕಚ್ಚೆ, ಬಾಯಿ ಎರಡು ಹಿಡಿತದಲ್ಲಿಲ್ಲ.ಆತನಿಂದ ನಾನು ಗೆದ್ದಿಲ್ಲ.ನಾನು ಶಾಸಕನಾಗಿದ್ದೆ ಪಕ್ಷೇತರ ಅಭ್ಯರ್ಥಿಯಾಗಿ,ಕುಮಾರಸ್ವಾಮಿ ಮೊದಲು ರಾಜೀನಾಮೆ ನೀಡಿ,ಪಕ್ಷ ವಿಸರ್ಜಿಸಲಿ,ಇದರಿಂದ ಯಾರಿಗೂ ಉಪಯೋಗವಿಲ್ಲ ಎಂದರು.
|
|