ಕುಣಿಗಲ್
ಉಜ್ಜಿನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ : ಅಧ್ಯಕ್ಷರಾಗಿ ಸುಮಲತಾ ಚನ್ನೇಗೌಡ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ
ಕುಣಿಗಲ್ : ಉಜ್ಜಿನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಚುನಾವಣೆ ನಡೆದು ಹನ್ನೊಂದು ಮತಗಳನ್ನು ಪಡೆಯುವ ಮೂಲಕ ಮಹಿಳಾ ಅಭ್ಯರ್ಥಿ ಸುಮಲತಾ ಚನ್ನೇಗೌಡ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ ಗ್ರಾಮ ಪಂಚಾಯಿತಿ 16 ಸದಸ್ಯರ ಬಲವನ್ನು ಹೊಂದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಪುರುಷನಿಗೆ ಮೀಸಲಾಗಿತ್ತು. ಈ ಸಂಬಂಧ ಗುರುವಾರ ಉಜ್ಜಿನಿ ಗ್ರಾಮ ಪಂಚಾಯಿತಿಯಲ್ಲಿ ಗುಪ್ತ ಮತದಾನ ನಡೆಯುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಮಲತಾ ಚನ್ನೇಗೌಡ ಹನ್ನೊಂದು ಮತಗಳನ್ನು ಪಡೆಯುವ ಮೂಲಕ ವಿಜೇತರಾದರೆ ವಾಣಿ ನಂಜೇಗೌಡ 5ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದಾರೆ.
ಇನ್ನೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಪುರುಷ ಸ್ಥಾನಕ್ಕೆ ಮೀಸಲಿದ್ದ ಹಿನ್ನೆಲೆಯಲ್ಲಿ ಪ್ರಕಾಶ್ ಮತ್ತು ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದಾರೆ ಶ್ರೀನಿವಾಸ್ 10 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಪ್ರಕಾಶ್ ಕೇವಲ 6 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕರ್ತವ್ಯಕ್ಕೆ ಚುನಾವಣಾಧಿಕಾರಿಗಳಾಗಿ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಸೌಮ್ಯ ರವರು ಕರ್ತವ್ಯ ನಿರ್ವಹಿಸಿದರು.
ಚುನಾವಣೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಲಿಯೂರು ದುರ್ಗ ಪೊಲೀಸ್ ಠಾಣೆಯ ಪಿಎಸ್ಸೈ ಚೇತನ್ ಗೌಡ ರವರ ನೇತೃತ್ವದಲ್ಲಿ ಭಾರೀ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.ಉಜ್ಜನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂಬಂಧ ಬುಧವಾರ ರಾತ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ ಜಿ ಕೊಪ್ಪಲು ಬಳಿ ಗ್ರಾಮ ಪಂಚಾಯತಿ ಸದಸ್ಯೆ ಪತಿ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಲೋಕೇಶ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತುರಾಜ್ ನಡುವೆ ಸಣ್ಣಪುಟ್ಟಗಲಾಟೆ ನಡೆದಿದೆ ! ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಉಜ್ಜಿನಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾನಕ್ಕೆ ನಡೆದ ಚುನಾವಣೆ ಕಾಂಗ್ರೆಸ್, ಜೆಡಿಎಸ್, ಪಕ್ಷಗಳ ಸ್ಥಳೀಯ ಮುಖಂಡರುಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಾಟಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.