ನಿಟ್ಟೂರು ಸರ್ಕಲ್ ಬಳಿ ಹೆದ್ದಾರಿ ಮೇಲ್ಸೇತುವೆಗೆ ಅಂಡರ್ ಪಾಸ್ ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ
ಗುಬ್ಬಿ : ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ನಿಟ್ಟೂರು ಗ್ರಾಮವನ್ನು ಇಬ್ಬಾಗ ಮಾಡಿದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಸಾರ್ವಜನಿಕರಿಗೆ ತೊಂದರೆ ಮಾಡಿದೆ. ಸುಮಾರು ಒಂದೂವರೆ ಕಿಮೀ ಸುತ್ತುವರಿದು ಓಡಾಡುವ ಅವೈಜ್ಞಾನಿಕ ಸೇತುವೆಗೆ ಕೂಡಲೇ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಆಗ್ರಹಿಸಿ ನಿಟ್ಟೂರು ಗ್ರಾಮಸ್ಥರು ಗುರುವಾರ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.
ನಿಟ್ಟೂರು ಸರ್ಕಲ್ ಬಳಿ ಜಮಾಯಿಸಿದ ನೂರಾರು ಮಂದಿ ಸ್ಥಳೀಯರು ಹೆದ್ದಾರಿ ಬಂದ್ ಮಾಡಿ ಒಂದು ತಾಸು ಪ್ರತಿಭಟನೆ ನಡೆಸಿದರು. ಸುಮಾರು 300 ಮೀಟರ್ ಮೇಲ್ಸೇತುವೆಗೆ ಸರ್ಕಲ್ ಬಳಿ ಮಾತ್ರ ಅಂಡರ್ ಪಾಸ್ ಇದೆ. ಆದರೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಒಂದೂವರೆ ಕಿಮೀ ಸುತ್ತುವರಿದು ಹೋಗುವ ಮಾರ್ಗ ಮಧ್ಯೆ ಅಂಡರ್ ಪಾಸ್ ಅತ್ಯಗತ್ಯವಿದೆ. ಇಲ್ಲಿನ ಅನಾನುಕೂಲ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಹೆದ್ದಾರಿ ಪ್ರಾಧಿಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರಿ ಕಚೇರಿ, ಶಾಲೆಗಳು, ಆಸ್ಪತ್ರೆ, ಸ್ಮಶಾನ ಹೀಗೆ ಎಲ್ಲದಕ್ಕೂ ಪರದಾಡುವ ದುಸ್ಥಿತಿ ತಂದಿದ್ದಾರೆ. ಮನವಿಗೆ ಪುರಸ್ಕರಿಸದ ಕಾರಣ ರಸ್ತೆಗಿಳಿಯಲಾಯಿತು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ಮೇಲ್ಸೇತುವೆ ಆರಂಭದಲ್ಲಿ ಈ ಅವ್ಯವಸ್ಥೆ ತಿಳಿದಿರಲಿಲ್ಲ. ಹೆದ್ದಾರಿ ಇಡೀ ಊರನ್ನೇ ಎರಡು ಭಾಗವಾಗಿಸಿದೆ. ಸ್ಮಶಾನಕ್ಕೆ ಎರಡು ಕಿಮೀ ಶವ ಹೊತ್ತು ಸಾಗಬೇಕಾದ ಅನಿವಾರ್ಯ ಎದುರಾಗಿದೆ. ಸುಮಾರು 300 ಮನೆಗಳು ಸಣ್ಣ ಪುಟ್ಟ ಕೆಲಸಕ್ಕೂ ಒಂದೂವರೆ ಕಿಮೀ ಸುತ್ತಬೇಕಾಗಿದೆ. ಪ್ರಮುಖ ವ್ಯಾಪಾರ ಕೇಂದ್ರವಾದ ನಿಟ್ಟೂರು ಈಗ ಕರಾಳ ಎನಿಸುತ್ತಿದೆ. ಹೀಗೆ ಸ್ಥಳೀಯರಿಗೆ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿಲಾಗಿತ್ತು. ಸಂಸದರಿಗೆ ತಡವಾಗಿ ಈ ಕಷ್ಟದ ಬಗ್ಗೆ ತಿಳಿದಿದೆ. ಪ್ರಾಧಿಕಾರದೊಂದಿಗೆ ಮಾತನಾಡಿ ಅಂಡರ್ ಪಾಸ್ ಮಾಡಿಸುವ ಭರವಸೆ ಸಂಸದರು ನೀಡಿದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ಮಾತನಾಡಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಆರಂಭದಿಂದಲೂ ಈ ಸಂಕಷ್ಟ ಬಗ್ಗೆ ಅಧಿಕಾರಿಗಳಿಗೆ ಹೇಳಲಾಗಿತ್ತು. ಹಲವಾರು ಬಾರಿ ಮನವಿ ಮಾಡಿದ್ದರೂ ಅಂಡರ್ ಪಾಸ್ ಬಗ್ಗೆ ಚಕಾರ ಎತ್ತಲಿಲ್ಲ. ಸೇತುವೆಗೆ ಮಣ್ಣು ಸುರಿದು ಕೆಲಸ ಆರಂಭಿಸಿದಂತೆ ಸ್ಥಳೀಯರ ಸಮಸ್ಯೆ ಈಗ ಅರಿವಿಗೆ ಬಂತು. ಹೊಲ ಗದ್ದೆಗೆ ತೆರಳಲು ಪರದಾಟ, ಆಸ್ಪತ್ರೆಗೆ ರೋಗಿಗಳು ಹೋಗಲು ಸಹ ಹಿಂಸೆ ಹೀಗೆ ಅನೇಕ ಸಮಸ್ಯೆ ನಡುವೆ ಜನ ಪ್ರತಿನಿಧಿಗಳ ಮೂಲಕ ಪ್ರಾಧಿಕಾರಕ್ಕೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ನಮಗೆ ಅಂಡರ್ ಪಾಸ್ ಮಾರ್ಗ ನಿರ್ಮಾಣ ಭರವಸೆ ಹಾಗೂ ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಈ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದೆ. ಮಕ್ಕಳು ಶಾಲೆಗೆ ತೆರಳಲು ಸಾಕಷ್ಟು ತೊಂದರೆ ಆಗಿದೆ. ಇಲ್ಲಿನ ವಾಸ್ತವ ಅವಲೋಕಿಸಿ ನಂತರ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿ ಎಂದು ಗ್ರಾಪಂ ಸದಸ್ಯೆ ಮಂಗಳ ಗೌರಮ್ಮ ಒತ್ತಾಯಿಸಿದರು.
ಒಂದು ತಾಸು ನಂತರ ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಬಿ.ಆರತಿ ಪ್ರತಿಭಟನಾ ನಿರತರ ಜೊತೆ ಚರ್ಚಿಸಿದರು. ಜನರ ಸಮಸ್ಯೆ ಖುದ್ದು ಪರಿಶೀಲಿಸಲು ಮೇಲ್ಸೇತುವೆ ಸುತ್ತುವರಿದು ಕಾಲ್ನಡಿಗೆ ನಡೆಸಿ ನಂತರ ಅವಶ್ಯವಿರುವ ಅಂಡರ್ ಪಾಸ್ ದಾರಿ ಬಗ್ಗೆ ಪ್ರಾಧಿಕಾರದ ಜೊತೆ ಚರ್ಚಿಸಿ ಸರ್ಕಾರದ ಗಮನಕ್ಕೂ ತರುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರತಿಭಟನೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಪ್ರಭಾಕರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಎಸ್.ಡಿ.ದಿಲೀಪ್ ಕುಮಾರ್, ದಸಂಸ ತಾಲ್ಲೂಕು ಸಂಚಾಲಕ ಜಿ.ಸಿ.ನರಸಿಂಹಮೂರ್ತಿ, ಗ್ರಾಪಂ ಸದಸ್ಯರಾದ ನರಸೇಗೌಡ, ಮಂಗಳಮ್ಮ, ಹಸೀನಾತಾಜ್, ಸ್ಥಳೀಯರಾದ ಎನ್.ಸಿ.ಶಿವಣ್ಣ, ಯೋಗೀಶ್, ಎನ್.ಎ. ನಾಗರಾಜು, ನಾಗಭೂಷಣ್ ಇತರರು ಇದ್ದರು.