ಇಲಾಖಾಧಿಕಾರಿಗಳು ಜನಸ್ನೇಹಿ ಎನ್ನುವ ರೀತಿ ಸಾರ್ವಜನಿಕರ ಕೆಲಸ ಮಾಡಿ : ಲೋಕಾಯುಕ್ತ ಅಧೀಕ್ಷಕ ವಲಿಬಾಷಾ
ಕುಂದುಕೊರತೆ ಸಭೆ

ಗುಬ್ಬಿ: ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಸೇವೆಯ ರೀತಿ ಮಾಡಿ ಜನಸ್ನೇಹಿ ಎಂದೆನಿಸಿಕೊಳ್ಳುವ ಜೊತೆಗೆ ಮುಗ್ದ ಜನರಿಗೆ ತಾಂತ್ರಿಕ ಸಮಸ್ಯೆಯನ್ನು ವಿವರಿಸಿ ಮುಂದುವರೆದು ಕಾನೂನು ಸಲಹೆ ಸೂಚನೆ ನೀಡುವ ಔದಾರ್ಯ ಬೆಳೆಸಿಕೊಳ್ಳಿ ಎಂದು ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ವಲಿಬಾಷಾ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳ ಅರ್ಜಿ ಸ್ವೀಕರಿಸಿ ನಂತರ ಇಲಾಖಾವಾರು ಕುಂದು ಕೊರತೆ ಆಲಿಸಿ ಮಾತನಾಡಿದರು.
ಕುಂದುಕೊರತೆ ಬಗ್ಗೆ ಅರ್ಜಿಗಳೇ ಬಾರದ ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಉಪನೋಂದಾಣಾಧಿಕಾರಿ ಗಳ ಕಚೇರಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ,ಅವರು ಸಾರ್ವಜನಿಕರಿಗೆ ಲೋಕಾಯುಕ್ತರ ಸಭೆಯ ಮಾಹಿತಿ ತಲುಪಿಸಬೇಕು. ಸಭೆ ಬಗ್ಗೆ ತಿಳಿಯದೇ ದೂರು ಅರ್ಜಿ ಬಂದಿಲ್ಲ. ಮೊದಲು ಇಲಾಖೆಯು ಪೂರ್ಣ ಮಾಹಿತಿಯ ಜೊತೆಗೆ ಸಭೆಗೆ ಬರುವುದನ್ನು ಕಲಿಯಿರಿ ಎಂದು ತಿಳಿ ಹೇಳಿದರು.
ಶಾಲೆಯ ಆರಂಭದ ಹಿನ್ನಲೆ ಸಮಸ್ಯೆ ಎದುರಾಗದಂತೆ ಎಚ್ಚರಿಕೆವಹಿಸಬೇಕು. ಕೊಠಡಿ ಸಮಸ್ಯೆ, ಸೋರುವ ಚಾವಣಿ, ಬಿಸಿಯೂಟ ದಿನಸಿ ದಾಸ್ತಾನು ಅಚ್ಚುಕಟ್ಟಾಗಿ ನಿರ್ವಹಿಸಲು ತಿಳಿಸಿದರು. ಕಳೆದ ಹತ್ತು ವರ್ಷದ ಹಿಂದೆ ಕಟ್ಟಿದ ಅಂಗನವಾಡಿ ಕಟ್ಟಡ ಮಾತ್ರ ಸೋರುವ ಬಗ್ಗೆ ತನಿಖೆ ಮಾಡಬೇಕಿದೆ. ಟಾಯ್ಲೆಟ್ ಇಲ್ಲದ ಶಾಲೆಗಳ ಬಗ್ಗೆ ಪಟ್ಟಿ ಮಾಡಲು ತಿಳಿಸಿದರು. ಈ ಜೊತೆಗೆ ಸಣ್ಣ ನೀರಾವರಿ ಇಲಾಖೆಯ ಕೆರೆ ಒತ್ತುವರಿ ಬಗ್ಗೆ ನಿಗಾ ವಹಿಸಿ ಕ್ರಮಕ್ಕೆ ಸೂಚಿಸಿದರು. ಹೇಮಾವತಿ ನಾಲೆಯ ಕಾಮಗಾರಿ ಕುರಿತು ಒಂದು ಸುಮುಟೋ ಪ್ರಕರಣ ದಾಖಲಿಸುವ ಬಗ್ಗೆ ಲೋಕಾಯುಕ್ತ ನಿರೀಕ್ಷಕ ರಾಮರೆಡ್ಡಿ ತಿಳಿಸಿದರು.
ನಂತರ ಸಾರ್ವಜನಿಕರ ದೂರು ಅನ್ವಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖಾಯಂ ಸಿಬ್ಬಂದಿ ಹಾಗೂ ಹೊರ ಗುತ್ತಿಗೆ ಸಿಬ್ಬಂದಿಗಳ ಗುರುತು ಸಿಗುತ್ತಿಲ್ಲ. ಈ ಜೊತೆಗೆ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಸಿಕ್ಕಿಲ್ಲ ಈ ಕಾರಣಕ್ಕೆ ಧಿಡೀರ್ ಭೇಟಿ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಆರತಿ, ತಾಪಂ ಇಓ ನರಸಿಂಹಯ್ಯ, ಸಿಪಿಐ ನದಾಫ್ ಇತರರು ಇದ್ದರು.