ಶಿರಾ ತಾಲ್ಲೂಕಿನ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ 5 ಕೋಟಿ : ಡಾ.ಸಿ.ಎಂ.ರಾಜೇಶ್ ಗೌಡ
ಕರಿರಾಮನಹಳ್ಳಿಯ ಶ್ರೀ ಕಣಿವೆ ಮಾರಮ್ಮ ದೇವಸ್ಥಾನದ ಕಳಸ ಪ್ರತಿಷ್ಠಾಪನೆ

ಶಿರಾ : ತಾಲ್ಲೂಕಿನ ವಿವಿಧ ಸಮುದಾಯದ ದೇವಾಲಯಗಳ ಅಭಿವೃದ್ಧಿಗೆ ಸರಕಾರ 5 ಕೋಟಿ ರೂಪಾಯಿ ಅನುದಾನ ನೀಡಿದ್ದು, ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಕರಿರಾಮನಹಳ್ಳಿ ಗ್ರಾಮದ ಶ್ರೀ ಕಣಿವೆ ಮಾರಮ್ಮ ದೇವಸ್ಥಾನದ ವಿಮಾನ ಗೋಪುರ ಮತ್ತು ಕಳಸ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಭಕ್ತಿ ಸರ್ವಕಾಲಕ್ಕೂ ಇರಬೇಕೆಂಬ ಉದ್ದೇಶದಿಂದ ಗ್ರಾಮಗಳಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದೇವೆ ದೇವಿಗೆ ನಿತ್ಯ ಪೂಜೆ ಪುನಸ್ಕಾರಗಳು ಸಾಂಗವಾಗಿ ನೆರವೇರಿದವು ಗ್ರಾಮದಲ್ಲಿ ಸುಭಿಕ್ಷೆ ಇರಲಿದೆ. ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ ಸಹ ಅವನಲ್ಲಿರುವ ವ್ಯಕ್ತಿತ್ವ ಮತ್ತು ಗುಣಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಎಂದರು.
ಕಳೆದ ವರ್ಷ ಜುಲೈ ತಿಂಗಳಿನಿಂದ ಸತತವಾಗಿ ಹೇಮಾವತಿ ನೀರು ಮದಲೂರು ಕೆರೆ ಹರಿದ ಕಾರಣ ಕೆರೆ ಇಂದಿಗೂ ಸಹ ಭರ್ತಿಯಾಗಿದೆ, ಇದರಿಂದ ಶಿರಾ ತಾಲೂಕಿನ ನೂರಾರು ಗ್ರಾಮಗಳ ಅಂತರ್ಜಲಮಟ್ಟ ಹೆಚ್ಚಳವಾಗಿದ್ದು ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ನೀಡಿರುವುದು ಹರ್ಷದಾಯಕ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ ಮಾತನಾಡಿ ಗ್ರಾಮೀಣ ಪ್ರದೇಶಗಳ ಎಲ್ಲಾ ಹಳ್ಳಿಗಳಲ್ಲಿ ದೇವಸ್ಥಾನಗಳು ಪುನಶ್ಚೇತನ ಗೊಳ್ಳುತ್ತಿರುವುದು ಧಾರ್ಮಿಕ ನಂಬಿಕೆ ಮೇಲೆ ಮನುಷ್ಯನ ಭಾವನೆ ಹೆಚ್ಚಿಸಿದೆ, ಗ್ರಾಮದಲ್ಲಿ ನೂತನವಾಗಿ ದೇವಸ್ಥಾನಗಳು ಕಟ್ಟಿ ಆರಾಧನೆ ಮಾಡುವುದರ ಜೊತೆಗೆ ನಿತ್ಯದ ಪೂಜಾಕೈಂಕರ್ಯ ಗಳಿಗೆ ಹೆಚ್ಚು ಒತ್ತು ನೀಡಿ. ಗ್ರಾಮಗಳಲ್ಲಿ ದೇವಸ್ಥಾನ ಕಟ್ಟುವಂತಹ ಕೆಲಸದ ಜೊತೆಗೆ ಒಂದು ಶಾಲೆಯನ್ನು ಕಟ್ಟುವಂತಹ ಕಾರ್ಯಕ್ಕೆ ಗ್ರಾಮಸ್ಥರುಗಳು ಮುಂದಾಗಬೇಕು ಇದರಿಂದ ಶೈಕ್ಷಣಿಕವಾಗಿಯೂ ಕೂಡ ಪ್ರಗತಿ ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ನಾರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಕೆ. ಮಂಜುನಾಥ್, ಮುಖಂಡರಾದ ಚಂಗಾವರ ಮಾರಣ್ಣ, ಶ್ರೀ ರಾಮೇಗೌಡ, ಹಲಗುಂಡೇಗೌಡ, ಗೋಪಿಕುಂಟೆ ಪುನೀತ್ ಗೌಡ, ತಾಪಂ ಮಾಜಿ ಅಧ್ಯಕ್ಷ ಜಿ.ಎನ್.ಮೂರ್ತಿ , ಹೊಸಹಳ್ಳಿ ರಾಮಚಂದ್ರಪ್ಪ, ಗ್ರಾಪಂ ಸದಸ್ಯ ಗೋವಿಂದರಾಜು, ಕೆ.ಎಂ.ರಂಗನಾಥ್, ಶ್ರೀರಂಗಪ್ಪ, ರವಿ, ರಮೇಶ್, ನಿಂಗೇಗೌಡ, ರಂಗಶಾಮಪ್ಪ, ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.