ಶಿರಾ : ಶಿರಾ ಕ್ಷೇತ್ರದಲ್ಲಿ ನಡೆದಂತಹ ಉಪಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಕಿಂಚಿತ್ತೂ ಲೋಪವಿಲ್ಲ. ಇದರ ಬಗ್ಗೆ ಜನರಿಗೆ ತಪ್ಪು ಸಂದೇಶ ನೀಡಲು ಮಾಜಿ ಸಚಿವರು ಹೊರಟಿದ್ದಾರೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಹೇಳಿಕೆ ನೀಡಿರುವ ಅವರು ಉಪಚುನಾವಣೆಯ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಮಾಜಿ ಸಚಿವರು ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈಗ ಮತ್ತೆ ಅವರು ಸುಂಪ್ರೀ ಕೋರ್ಟ್ಗೆ ಅರ್ಜಿ ಸಲ್ಲಿಸಲು ಅವಕಾಶ ಕೇಳಿದ್ದಾರೆ. ಅಷ್ಟೇ ವಿನಹ ಬೇರೆನು ಇಲ್ಲ. ಈ ಬಗ್ಗೆ ನನಗೆ ನೋಟೀಸ್ ಬಂದಿದೆ. ಇದರ ಬಗ್ಗೆ ನಮ್ಮ ವಕೀಲರು ನ್ಯಾಯಾಲಯಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ವಿನಾಕಾರಣ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇ ನ್ಯಾಯ ಪಡೆಯಲು ಎಲ್ಲರಿಗೂ ಅವಕಾಶವಿದೆ. ಅದರ ಬಗ್ಗೆ ನಮ್ಮದೇನು ತಕರಾರಿಲ್ಲ. ಆದರೆ ವಿನಾಕಾರಣ ಗೊಂದಲ ಮೂಡಿಸುವ ಕೆಲಸವನ್ನು ಹಿರಿಯ ರಾಜಕಾರಣಿಗಳು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.