ಏ.21ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈಧಾನದಲ್ಲಿ ರೈತರ ಬೃಹತ್ ಸಮಾವೇಶ : ಕೋಡಿಹಳ್ಳಿ ಚಂದ್ರಶೇಖರ್
ತುಮಕೂರು : ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಾಗು ಭೂ ಸ್ವಾಧೀನ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಏಪ್ರಿಲ್ 21 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಿತು. ಆದರೆ ರಾಜ್ಯ ಸರಕಾರ ಮಾತ್ರ, ರೈತರು ಹಲವಾರು ಮನವಿಗಳನ್ನು ನೀಡಿದ್ದರೂ, ಇಂದು, ನಾಳೆ ಎಂದು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಸರಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಇದು ಚುನಾವಣೆ ವರ್ಷವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ತನ್ನ ಚಟುವಟಿಕೆಗಳನ್ನು ಆರಂಭಿಸಿವೆ. ಈ ನಿಟ್ಟಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ಹೋರಾಟದಲ್ಲಿರುವ ರೈತ ಸಂಘವೂ ಪರ್ಯಾಯ ರಾಜಕಾರಣದ ಚಿಂತನೆಯಲ್ಲಿದ್ದು, ಏಪ್ರಿಲ್ 21ಕ್ಕೆ ಈ ಕುರಿತು ಸ್ಪಷ್ಟ ನಿಲುವು ಕೈಗೊಳ್ಳಲಿದೆ.ಚಳವಳಿಗಾರರನ್ನು ಒಗ್ಗೂಡಿಸಿ, ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಮಾಡುವ ಪ್ರಯತ್ನಕ್ಕೆ ಈ ಸಮಾವೇಶ ನಾಂದಿ ಹಾಡಲಿದೆ.ಈ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ದೇಶದಲ್ಲಿ ದಿನೇ ದಿನ ಇಂಧನ ಬೆಲೆಗಳ ಹೆಚ್ಚಳ, ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದ್ದು,ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರಕಾರ,ಪರೋಕ್ಷವಾಗಿ ಹಿಜಾಬ್,ಹಲಾಲ್,ಆಜ್ಹಾನ್ ನಂತಹ ಭಾವನಾತ್ಮಕ ವಿಚಾರಗಳಿಗೆ ಬೆಂಬಲ ನೀಡುತ್ತಾ, ತನ್ನ ವೈಫಲ್ಯವನ್ನು ಮರೆ ಮಾಚಲು ಹೊರಟಿದೆ. ರೈತರು ಮತ್ತು ಹಸಿದವರ ನಡುವಿನ ಸಂಬಂಧಗೊತ್ತಿಲ್ಲದವರು ಸೃಷ್ಟಿಸುತ್ತಿರುವ ಗೊಂದಲಗಳಿಗೆ ಮಾನ್ಯತೆ ನೀಡಿ, ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಂಬರುವ ಚುನಾವಣೆಯಲ್ಲಿ ತನ್ನ ಯಾವ ಸಾಧನೆಯನ್ನು ತೋರಿಸಿ, ಚುನಾವಣೆಗೆ ಹೋಗಬೇಕು ಎಂಬುದು ತಿಳಿಯದಾಗಿದೆ.ಅರ್ಥಿಕತೆ ದಿವಾಳಿಯಾಗಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.ಜೈನ್ ಸೈನಿಕರು ಭಾರತದ ಗಡಿಯೊಳಗೆ ಬಂದು, ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ.ಇಂತಹ ಜ್ವಲಂತ ಸಮಸ್ಯೆಗಳಿಂದ ಜನರನ್ನು ಮನಸ್ಸನ್ನು ಬೇರೆಡೆಗೆ ಸೆಳೆಯಲು ಭಾವನಾತ್ಮಕ ವಿಚಾರಗಳಿಗೆ ಒತ್ತು ನೀಡುತ್ತಿದೆ. ಬಿಜೆಪಿಯವರು ಮನುಷ್ಯರೇ ಅಲ್ಲ ಎಂಬುದು ಇದರಿಂದ ತೋರಿಸುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್,ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಜಿಲ್ಲಾ ಗೌರವಾಧ್ಯಕ್ಷ ಧನಂಜಯ್ ಆರಾಧ್ಯ,ವಿವಿಧ ತಾಲೂಕುಗಳ ಅಧ್ಯಕ್ಷರಾದ ಕಿರಣ್,ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.