ಆರೋಗ್ಯತುಮಕೂರು
Trending

15 ಸಾವಿರಕ್ಕು ಹೆಚ್ಚು ಜೀವಗಳು ಭೂಮಿಗೆ ಬರುವಂತೆ ಮಾಡಿದ ಸೂಲಗಿತ್ತಿ ನರಸಮ್ಮನವರ ಸಾಧನೆ ಶ್ಲಾಘನೀಯ : ಶ್ರೀಮಾದಾರಚನ್ನಯ್ಯ ಸ್ವಾಮೀಜಿ

ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ 101ನೇ ಜಯಂತಿ ಕಾರ್ಯಕ್ರಮ

ತುಮಕೂರು : ಪ್ರಶಸ್ತಿಗಾಗಿ ಅನೇಕರು ರಾಜಕಾರಣಿಗಳ,ಮಠಾಧೀಶರ ಶಿಫಾರಸ್ಸುಗಳನ್ನು ತೆಗೆದುಕೊಂಡು ಹೋಗುತ್ತಾರೆ.ಆದರೆ ಸೂಲಗಿತ್ತಿ ನರಸಮ್ಮ ಅವರ ಮಾಡಿದ ಸೇವೆಯೇ ಅವರು ಪದ್ಮಶ್ರೀ ಪ್ರಶಸ್ತಿ ಪಡೆಯಲು ಇದ್ದ ಶಿಫಾರಸ್ಸುಗಳು ಎಂದು ಚಿತ್ರದುರ್ಗದ ಶ್ರೀಮಾದಾರಚನ್ನಯ್ಯ ಸ್ವಾಮೀಜಿ ಆಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ 101ನೇ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು,ಸಹಜ ಹರಿಗೆ ಎಂಬುದು ವೈದ್ಯಲೋಕಕ್ಕೆ ಸವಾಲಾಗಿರುವ ಇಂದಿನ ಕಾಲದಲ್ಲಿ 15 ಸಾವಿರಕ್ಕು ಹೆಚ್ಚು ಜೀವಗಳು ಭೂಮಿಗೆ ಬರುವಂತೆ ಮಾಡಿದ ಇವರ ಸಾಧನೆ ನಿಜಕ್ಕೂ ಶ್ಲಾಘನೀಯ. ಪ್ರಶಸ್ತಿಯ ಅರಿವೇ ಇಲ್ಲದ ನರಸಮ್ಮನವರಿಗೆ ನಾಲ್ಕನೇ ದೊಡ್ಡ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಅವರ ನಿಷ್ಕಲ್ಮಶ ಸೇವೆಗೆ ಸಂದ ಗೌರವ ಎಂದರು.
ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಅವರ ಮಗ ಪಾವಗಡ ಶ್ರೀರಾಮ್ ತಮ್ಮ ತಾಯಿಯ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಹಿಳಾ ಸಾಧಕಿಯರನ್ನು ಗುರುತಿಸಿ,ಅವರ ಹೆಸರಿನಲ್ಲಿ ರಾಜ್ಯಮಟ್ಟದ ಡಾ.ಸೂಲಗಿತ್ತಿ ನರಸಮ್ಮ ಪ್ರಶಸ್ತಿ ನೀಡುತ್ತಾ ಬಂದಿದ್ದು,ಇಂದು ಒಂದು ರೀತಿಯಲ್ಲಿ ಸಾಧನೆಯ ಹಾದಿಯಲ್ಲಿ ನಡೆಯಬೇಕೆಂಬುವವರಿಗೆ ಸ್ಪೂರ್ತಿದಾಯಕ ವಾಗಿದೆ.ಪ್ರಶಸ್ತಿ ಜೊತೆಗೆ ನೀಡುವ ಹಣ,ಫಲಕಗಳು ಮುಖ್ಯವಲ್ಲ.ಪ್ರಶಸ್ತಿಯ ಹೆಸರು ಮುಖ್ಯ ಎಂದು ಶ್ರೀಮಾದಾರ ಚನ್ನಯ್ಯಸ್ವಾಮೀಜಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಡಾ.ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರುವ ಮುನ್ನ ಮತ್ತು ನಂತರದಲ್ಲಿ ಹಲವಾರು ಬಾರಿ ಧನಿಯಕುಮಾರ್ ಜೊತೆಯಲ್ಲಿ ಅವರ ಮನೆಗೆ ಭೇಟಿ ನೀಡಿದ್ದೇನೆ.ಮುಗ್ಧತೆಗೆ ಮತ್ತೊಂದು ಹೆಸರಾಗಿದ್ದ ಸೂಲಗಿತ್ತಿ ನರಸಮ್ಮನವರು,ಯಾವ ಪ್ರಶಸ್ತಿಗೂ ಆಸೆ ಪಟ್ಟವರಲ್ಲ.ಆದರೂ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಅರಿಸಿ ಬಂದಿವೆ.ದೇಶದ ಅತ್ಯುನ್ನತ ನಾಲ್ಕನೇ ಪ್ರಶಸ್ತಿ ಪದ್ಮಶ್ರೀ ಅವರಿಗೆ ಸಲ್ಲುವ ಮೂಲಕ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ಸೂಟು,ಬೂಟು ಹಾಕಿದವರಿಗೆ ಪ್ರಶಸ್ತಿಗಳು ಲಭಿಸುತ್ತಿದ್ದ ಕಾಲ ಹೋಗಿ,ಜನಸಾಮಾನ್ಯರಿಗೂ ಇಂತಹ ಪ್ರಶಸ್ತಿಗಳು ಲಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಹಾಗೂ ಡಾ.ಸೂಲಗಿತ್ತಿ ನರಸಮ್ಮ ಅವರ ಪುತ್ರ ಪಾವಗಡ ಶ್ರೀರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ,ಗಡಿನಾಡಿನ ಕುಗ್ರಾಮದಲ್ಲಿ ಹುಟ್ಟಿದ ನರಸಮ್ಮ ತಮ್ಮ ಅಜ್ಜಿಯಿಂದ ಕಲಿತ ಸೂಲಗಿತ್ತಿ ಕಸಬುದನ್ನು ಜಾತಿ,ಭೇಧವಿಲ್ಲದೆ ಎಲ್ಲರ ಮನೆಗೂ ಹೋಗಿ,ಸಹಜ ಹೆರಿಗೆ ಮಾಡಿಸುವ ಮೂಲಕ ಒಳ್ಳೆಯ ಕೈಗುಣ ಹೊಂದಿದವರು,ಬಸುರಿ ಹೆಣ್ಣು ಮಕ್ಕಳ ಮೈದಡವಿ ಇಂತಹದ್ದೇ ಮಗು ಎಂದು ಹೇಳುವಷ್ಟು ಜ್ಞಾನವನ್ನು ಹೊಂದಿದ್ದರು. ಸರಕಾರ ಇವರ ಸಾಧನೆಯನ್ನು ಗೌರವಿಸಿ,ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಅವರ ಹೆಸರು ಮತ್ತಷ್ಟು ಚಿರಸ್ಥಾಯಿ ಯಾಗುವಂತೆ ಮಾಡಿದೆ.ಅವರ ಹೆಸರಿನಲ್ಲಿ ಮಹಿಳಾ ಸಾಧಕಿಯರಿಗೆ ರಾಜ್ಯಮಟ್ಟದ ಡಾ.ಸೂಲಗಿತ್ತಿ ನರಸಮ್ಮ ಪ್ರಶಸ್ತಿ ನೀಡುವ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಸಮತಾ ಬಿ.ದೇಶಮಾನೆ,ಸಾಹಿತಿ ಬಾ.ಹ.ರಮಾಕುಮಾರಿ,ಗಾಯಕಿ ಕುಮಾರಿ ಉಮಾ ವೈ.ಜಿ.ಅವರುಗಳಿಗೆ 2022ನೇ ಸಾಲಿನ ಡಾ.ಸೂಲಗಿತ್ತಿ ನರಸಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಡಾ.ಲಕ್ಷ್ಮಣ ದಾಸ್,ಡಾ.ಲಕ್ಷ್ಮೀಕಾಂತ್,ಜಿ.ಪಂ.ಸದಸ್ಯ ನಾರಾಯಣಮೂರ್ತಿ,ತಾ.ಪಂ.ಮಾಜಿ ಅಧ್ಯಕ್ಷ ನರಸಿಂಹಮೂರ್ತಿ,ಸಮಾಜ ಸೇವಕ ಇಕ್ಬಾಲ್ ಅಹಮದ್,ಡಾ.ಅರುಂಧತಿ,ಸಾಹಿತಿ ಶೈಲಾ ನಾಗರಾಜು,ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಮತ್ತು ತಂಡದವರಿಂದ ರಂಗಗೀತೆಗಳ ಗಾಯನ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker