ಜಿಲ್ಲೆತುಮಕೂರು

ದಯೆ, ದಾಕ್ಷಿಣ್ಯಕ್ಕೆ ಬಲಿಯಾಗದೆ ಕಾನೂನು ಪರಿಪಾಲನೆ ಮಾಡಿ : ಪೊಲೀಸ್ ಮಹಾನಿರ್ದೇಶಕ ಪಿ. ಹರಿಶೇಖರನ್

ತುಮಕೂರು : ಪೊಲೀಸ್ ಇಲಾಖೆಯಲ್ಲಿ ಯಾವುದೇ ದಯಾ, ದಾಕ್ಷಿಣ್ಯ ಇಲ್ಲದೆ ಕಾನೂನು ಪರಿಪಾಲನೆ ಮಾಡಬೇಕು ಎಂದು ಪೊಲೀಸ್ ತರಬೇತಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಪಿ. ಹರಿಶೇಖರನ್ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದ ಅವರು, ಯಾರಿಗೂ ದಯೆ ತೋರಿಸದೆ, ದಾಕ್ಷಿಣ್ಯ ತೋರಿಸದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ನಿಸ್ವಾರ್ಥವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದರು.
ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ಜನ ಸಮುದಾಯ ಅಂತಹವರನ್ನು ಸದಾ ಸ್ಮರಿಸುತ್ತದೆ.ಹಾಗಾಗಿ ತರಬೇತಿ ಮುಗಿಸಿಕೊಂಡು ಕರ್ತವ್ಯ ಹಾಜರಾಗುವ ಪ್ರಶಿಕ್ಷಣಾರ್ಥಿಗಳು ಇದನ್ನು ತಮ್ಮ ಸೇವಾ ಅವಧಿಯಲ್ಲಿ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು.ಪೊಲೀಸ್ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಕಾರದ ಮತ್ತು ಜನತೆಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಪಿ.ಹರಿಶೇಖರನ್ ಹೇಳಿದರು.

ಭಾರತ ಹಲವಾರು ಜಾತಿ, ಮತಗಳನ್ನು ಹೊಂದಿರುವ ದೇಶ. ಇದು ಸಂವಿಧಾನದ ಮೂಲ ಆಶಯವೂ ಆಗಿದೆ. ನಮ್ಮ ಸಂವಿಧಾನದ ಮೂಲ ಆಶಯ ಕಾಪಾಡುವುದನ್ನು ಪೊಲೀಸರು ಮರೆಯಬಾರದು.ಸರಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೂ ಸೌಲ್ಯಭ್ಯಗಳನ್ನು ನೀಡುತ್ತಿದ್ದು, ಮಹಿಳೆಯರಿಗೆ ಶೇ. 30-33 ರಷ್ಟು ಮೀಸಲಾತಿ ಕೊಡಲು ಸಿದ್ದವಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ಕೊಡುವ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಅವರು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ.ಹೀಗಾಗಿ ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದ ಅವರು,ರಾಜ್ಯ ಸೈಬರ್ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಹಾಗೂ ನಿಗ್ರಹಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಸಾಗಲು ಇಲಾಖೆ ತೀರ್ಮಾನಿಸಿದೆ. ಈಗಾಗಲೇ ಡಕಾಯಿತಿ ಪ್ರಕರಣಗಳು ಇಳಿಕೆಯಾಗಿವೆ.ಜತೆಗೆ ಐದಾರು ವರ್ಷದಿಂದ ಹೆಚ್‌ಬಿಟಿ ಪ್ರಕರಣಗಳು ಕಡಿಮೆಯಾಗಿವೆ. ಪ್ರಶಿಕ್ಷಣಾರ್ಥಿಗಳು ಸೈಬರ್ ಅಪರಾಧ ಪತ್ತೆಹಚ್ಚುವ ತಂತ್ರಜ್ಞಾನದ ಕಡೆಯೂ ಗಮನ ಹರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ 11ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಹಾಗೂ ಗುರಿಗಾರ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿ ತಾರಾಮಣಿ ಹೆಚ್.ಆರ್. ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಒಳಾಂಗಣ ಚಟುವಟಿಕೆಯಲ್ಲಿ ತಾರಾಮಣಿಗೆ ಪ್ರಥಮ, ಸುಷ್ಮಿತ ಬಿ.ಹೆಚ್. ದ್ವಿತೀಯ, ಲಾವಣ್ಯ ಕೆ., ಆರ್. ರಾಜಶ್ರೀ, ಅನಿತಾ ಕೊನ್ನಾಪೂರ್ ತೃತೀಯ ಬಹುಮಾನ,ಹೊರಾಂಗಣದಲ್ಲಿ ಮಧುಶ್ರೀ ಎಂ.ಎಸ್. ಪ್ರಥಮ, ತಾರಾಮಣಿ ಹೆಚ್.ಆರ್. ದ್ವಿತೀಯ, ಸುಷ್ಮಿತ ಹಾಗೂ ಪೂಜಾ ತೃತೀಯ ಬಹುಮಾನ ಪಡೆದುಕೊಂಡರು.ಗುರಿಗಾರದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಧು ಕೆ.ಎಸ್. ಪ್ರಥಮ, ದೀಕ್ಷಿತಾ ದ್ವಿತೀಯ ರಮ್ಯಶ್ರೀ ತೃತೀಯ ಬಹುಮಾನ ಪಡೆದುಕೊಂಡರು. ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥ ಸಂಚಲ ನಡೆಯಿತು
8 ತಿಂಗಳ ಕಾಲ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪೋಷಕರು ಪಾಲ್ಗೊಂಡು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ದೃಶ್ಯಗಳು ವಿಶೇಷವಾಗಿ ಕಂಡು ಬಂದವು.ತರಬೇತಿ ಮುಗಿಸಿದ ಪ್ರಶಿಕ್ಷಣಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವ ಮುನ್ನ ತನ್ನ ಸಹದ್ಯೋಗಿಗಳೊಂದಿಗೆ ಭಾವುಕರಾಗಿ ಮಾತನಾಡುತ್ತಾ ಆನಂದಬಾಷ್ಪದ ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಅಡಿಷನಲ್ ಎಸ್ಪಿ ಹಾಗೂ ತರಬೇತಿ ಶಾಲೆಯ ಪ್ರಾಂಶುಪಾಲರಾದ ಟಿ.ಜೆ ಉದೇಶ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker