
ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್‌ನಲ್ಲಿ ಅಂಗವಿಕಲರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಖಂಡನೀಯ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಅಧ್ಯಕ್ಷ ಸಿ.ಗಂಗರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಅಂಗವಿಕಲರ ಅಭಿವೃದ್ದಿಗೆ ಪ್ರತ್ಯೇಕ ಅಭಿವೃದ್ದಿ ನಿಗಮ,ಈಗಿರುವ ದರದಲ್ಲಿಯೇ ರಿಯಾಯಿತಿ ಬಸ್ ಪಾಸ್ ಮುಂದುವರೆಸುವುದು, ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂಗಳ ಸೇವೆ ಖಾಯಂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗಿತ್ತು.ಆದರೆ ಒಂದಕ್ಕೂ ಮಾನ್ಯತೆ ನೀಡದೆ ಕಡೆಗಣಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಆರು ತಿಂಗಳ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಮನೋವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ನೀಡುತ್ತಿದ್ದು ಮಾಶಾಸನವನ್ನು 1400 ರೂಗಳಿಂದ 2000 ರೂಗಳಿಗೆ ಹೆಚ್ಚಿಸಿದ್ದರಿಂದ ಅವರ ಮೇಲೆ ಅಂಗವೀಕಲರು ಭಾರಿ ನಿರೀಕ್ಷೆ ಇರಿಸಿಕೊಂಡಿದ್ದರು.ಆದರೆ ನಮ್ಮ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಇದೊಂದು ಅಂಗವಿಕಲ ಸಂವೇಧನಾರಹಿತ ಸರಕಾರ ಎಂದು ಟೀಕಿಸಿದರು.
ಜಾತಿಗೊಂದು ಅಭಿವೃದ್ದಿ ನಿಗಮ ಮಾಡಿ, ಕೋಟಿ ಕೋಟಿ ಹಣ ನೀಡುವ ಬಿಜೆಪಿ ಸರಕಾರಕ್ಕೆ ರಾಜ್ಯದಲ್ಲಿ ಸುಮಾರು 20 ಲಕ್ಷ ದಷ್ಟಿರುವ ಅಂಗವಿಕಲರು ಕಣ್ಣಿಗೆ ಕಾಣದಿರುವುದು ದುರದೃಷ್ಟಕರ.ಪ್ರತ್ಯೇಕ ನಿಗಮ ಸ್ಥಾಪನೆಯಿಂದ ಅಂಗವಿಕಲರಿಗೆ ಹೆಚ್ಚಿನ ಅರ್ಥಿಕ ನೆರವು ದೊರೆಯುವ ಸಾಧ್ಯತೆಗಳಿದ್ದವು.ಅಲ್ಲದೆ ಕಳೆದ ಎರಡು ವರ್ಷಗಳಿಂದ ಅಂಗವಿಕಲರ ಅಧಿನಿಯಮ -1995ರ ಆಯುಕ್ತರ ಹುದ್ದೆ ಕೇಂದ್ರ ಮತ್ತು ರಾಜ್ಯದಲ್ಲಿ ಖಾಲಿ ಇದೆ.ಹಲವಾರು ಬಾರಿ ಮನವಿ ಮಾಡಿದ್ದರು. ಆಯುಕ್ತರ ನೇಮಕ ಮಾಡದೆ,ನಮ್ಮ ಕಷ್ಟ, ಸುಖಃಗಳನ್ನು ಆಲಿಸಲು ಯಾರು ಇಲ್ಲದಂತೆ ಮಾಡಿದ್ದಾರೆ ಎಂದು ಸಿ.ಗಂಗರಾಜು ದೂರಿದರು.
ದೇಶದಲ್ಲಿ ಸುಮಾರು 28 ಬಗೆಯ ಅಂಗವೈಕಲ್ಯವನ್ನು ಕಾಣಬಹುದು. ಅವರಲ್ಲಿಯೇ ಅಂಧರು, ಶೇ40ರಷ್ಟು, ಶೇ75ರಷ್ಟು ಅಂಗವೈಕಲ್ಯರು ಎಂಬ ಭೇಧ ಭಾವ ಉಂಟು ಮಾಡಿ,ಒಂದು ವರ್ಗಕ್ಕೆ ದೊರೆತ ಸರಕಾರದ ಸವಲತ್ತು, ಮತ್ತೊಂದು ವರ್ಗಕ್ಕೆ ತಲುಪದಂತೆ ಮಾಡಿದ್ದಾರೆ. ಉನ್ನತ ಶಿಕ್ಷಣ ಕಲಿಯುತ್ತಿರುವ ಅಂಧರಿಗೆ ನೀಡುತ್ತಿರುವ ಲ್ಯಾಪ್‌ಟಾಫ್ ಸೌಲಭ್ಯವನ್ನು ಇತರ ಅಂಗವಿಕಲರಿಗೂ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ.ಒಂದು ವೇಳೆ ಸರಕಾರ ಇತ್ತ ಗಮನಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಅಂಗವಿಕಲರು ಒಗ್ಗೂಡಿ, ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದು ಸಿ.ಗಂಗರಾಜು ತಿಳಿಸಿದರು.
ಎಂ.ಆರ್.ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಚಿತ್ತಪ್ಪ ಮಾತನಾಡಿ,ರಾಜ್ಯದಲ್ಲಿ ಸುಮಾರು 5000 ಜನರು ಈ ವೃತ್ತಿ ಮಾಡುತ್ತಿದ್ದು,ಇವರಲ್ಲಿ ಸುಮಾರು 1500 ಜನ ಮಹಿಳೆಯರು ಇದ್ದಾರೆ.ಇವರಲ್ಲಿ ಹೆರಿಗೆ ರಜೆಗೆಂದು ಹೋದವರಿಗೆ ಇತರೆ ಇಲಾಖೆಗಳ ನೌಕರರಿಗೆ ನೀಡಿದಂತೆ ವೇತನ ಸಹಿತ ರಜೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಅಲ್ಲದೆ ಕಳೆದ 6 ತಿಂಗಳಿಂದ ಗೌರವಧನ ನೀಡಿಲ್ಲ. ಸರಕಾರ ಕೂಡಲೇ ಗೌರವಧನ ನೀಡಬೇಕೆಂದು ಒತ್ತಾಯಿಸಿದರು.
ಅಂಗವಿಕಲ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಾವುಗಳೇ ಹಣ ತೊಡಗಿಸಿ, ಒಂದು ಸಹಕಾರ ಸಂಘವನ್ನು ಮಾಡಿ, ಅರ್ಥಿಕ ಅಭಿವೃದ್ದಿಗೆ ಮುಂದಾಗಿದ್ದೇವೆ.ಆದರೆ ಸರಕಾರ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ,ಸ್ವಸಹಾಯ ಸಂಘಗಳಿಗೆ ನೀಡಿದಂತೆ ನಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೆ, ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಪ್ರತ್ಯೇಕ ಅಭಿವೃದ್ದಿ ನಿಗಮ ತೆರೆದು, ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ದಿ ನಿಗಮದ ಶಾಖೆಯನ್ನು ಕರ್ನಾಟಕದಲ್ಲಿಯೂ ತೆರೆದು, ಅಂಗವಿಕಲರಿಗೆ ಅನುಕೂಲ ಮಾಡಿಕೊಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಗವಿಕಲರ ಕಲ್ಯಾಣ ವೇದಿಕೆ ಪ್ರಧಾನ ಕಾರ್ಯದರ್ಶಿ ಇನಾಯತ್‌ಖಾನ್, ವಿವಿಧ ತಾಲೂಕುಗಳ ಅಧ್ಯಕ್ಷರಾದ ದಾಸರಾಜು, ಗಂಗರಾಜು, ಸಿದ್ದಪ್ಪ, ಕುಸುಮ, ಗಿರೀಶ್‌ಕುಮಾರ್,ಶ್ರೀರಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.