ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಸೂಕ್ತವಲ್ಲ : ಶಾಸಕ ಎಸ್.ಆರ್.ಶ್ರೀನಿವಾಸ್
ಗುಬ್ಬಿ: ಯಾವ ಮಾನದಂಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದಾರೆ ತಿಳಿಯದು. ಜಿಲ್ಲೆಯ ಸಮಗ್ರ ಚಿತ್ರಣ ಬಲ್ಲ ಸ್ಥಳೀಯರು ಜವಾಬ್ದಾರಿ ವಹಿಸಿಕೊಳ್ಳುವುದು ಸೂಕ್ತ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಗಂಗಸಂದ್ರ ಗ್ರಾಮದಲ್ಲಿ 67 ಲಕ್ಷ ರೂಗಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಬೇರೆ ಜಿಲ್ಲೆಯ ಆರಗ ಜ್ಞಾನೇಂದ್ರ ಅವರಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ. ವಾಸ್ತವವಾಗಿ ಸರಿಯಾದ ನಿರ್ಣಯ ಮುಖ್ಯಮಂತ್ರಿಗಳಿಂದ ಬರಲಿಲ್ಲ ಎನ್ನಬಹುದು. ಎಲ್ಲಾ ಪಕ್ಷದಲ್ಲೂ ಇರುವಂತೆ ಆಂತರಿಕ ಭಿನ್ನಾಭಿಪ್ರಾಯ ಆಡಳಿತ ಪಕ್ಷದಲ್ಲೂ ಇದೆ ಎಂದು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದರು.
ಆಪರೇಷನ್ ಕಮಲ ಆಪರೇಷನ್ ಹಸ್ತ ಎಂಬ ಅಮಿಷೆಗೆ ಎಂದೂ ಒಳಗಾದವನಲ್ಲ. ಆಸೆಗೆ ಒಳಗಾಗಿದಿದ್ದರೇ ಪ್ರಸ್ತುತ ಈ ದಿನದಲ್ಲೂ ಸಚಿವನಾಗಿಯೇ ಇರುತ್ತಿದ್ದೆ ಎಂದು ಮಾರ್ಮಿಕವಾಗಿ ಮಾತನಾಡಿದ ಅವರು ಜೆಡಿಎಸ್ ಪಕ್ಷದಿಂದ ಹೊರದಬ್ಬಿದ ಹಿನ್ನಲೆ ಅನ್ಯ ಮಾರ್ಗ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ. ನನ್ನ ಕ್ಷೇತ್ರದಲ್ಲೇ ಬೇರೆ ಅಭ್ಯರ್ಥಿ ಘೋಷಣೆ ಮಾಡಿದ ಮೇಲೆ ನನ್ನ ಅಸ್ತಿತ್ವಕ್ಕೆ ಬೇರೆ ದಾರಿ ನೋಡಲೇಬೇಕು. ಈ ಬಗ್ಗೆ ಎಲ್ಲಾ ತಿಳಿದ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಶಿವಸಂದ್ರ ಕೆರೆ ಸೇರಿದಂತೆ ಕೆಲ ಕೆರೆಗಳು ಎತ್ತಿನಹೊಳೆ ಯೋಜನೆಗೆ ಒಳಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಹೇಮಾವತಿ ಹಂಚಿಕೆಗೆ ಒಳಪಟ್ಟ ಎಲ್ಲಾ ಕೆರೆಗಳು ಹಾಗೆಯೇ ಉಳಿಸಿಕೊಳ್ಳಲು ಈಗಾಗಲೇ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಈಚೆಗೆ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಪ್ರಸ್ತಾಪಿಸಿದ್ದಾರೆ. ಆದರೆ ನಾನು ಅಧಿಕಾರಿಗಳ ಜೊತೆ ಹೇಮಾವತಿ ಅಗತ್ಯತೆ ಬಗ್ಗೆ ವಿವರಿಸಿ ಮೊದಲಿನಂತೆ ಉಳಿಸಿಕೊಳ್ಳುವ ಭರವಸೆ ನೀಡಿದ ಅವರು ಗಡಿಭಾಗದ ರಸ್ತೆಗೆ ಮನ್ನಣೆ ನೀಡಿ ಸಂಪಿಗೆ ರಸ್ತೆ ಸಂಪರ್ಕದ ರಸ್ತೆಗೆ 67 ಲಕ್ಷ ರೂ ನೀಡಲಾಗಿದೆ ಎಂದರು.
ಕಡಬ ಗ್ರಾಪಂ ಅಧ್ಯಕ್ಷ ಸಿ.ಕೆ.ಗೌಡ, ಸದಸ್ಯರಾದ ವೆಂಕಟರಂಗಯ್ಯ, ಪೂರ್ಣಿಮಾ ಶಿವಕುಮಾರ್, ರಂಗನಾಥ್, ಮುಖಂಡರಾದ ಮಧು, ಗಿರೀಶ್, ನೇಮರಾಜ್, ಚನ್ನಿಗಪ್ಪ, ಬೆಲವತ್ತ ಶಿವಕುಮಾರ್ ಇತರರು ಇದ್ದರು.