ಕ್ಷೇತ್ರಕ್ಕೆ ವಿಜಯೇಂದ್ರ ಅಥವಾ ಯಡಿಯೂರಪ್ಪನವರೇ ಬಂದರೂ ಎದೆಗುಂದುವ ಜಾಯಮಾನ ನನ್ನದಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್
ಗುಬ್ಬಿ : ಗುಬ್ಬಿ ಕ್ಷೇತ್ರಕ್ಕೆ ಮುಂದಿನ ಪ್ರತಿಸ್ಪರ್ಧಿಯಾಗಿ ವಿಜಯೇಂದ್ರರೇ ಬರಲಿ ಅಥವಾ ಯಡಿಯೂರಪ್ಪ ನವರೇ ಬರಲಿ ಎದೆಗುಂದುವ ಜಾಯಮಾನ ನನ್ನದಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದರು.ತಾಲ್ಲೂಕಿನ ಬಿದರೆ ಗ್ರಾಮದಲ್ಲಿ ಜಲ ಜೀವನ್ ಯೋಜನೆಯ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ
ಜನರ ಆಶೀರ್ವಾದವೇ ಮುಖ್ಯ. ಜನಸೇವೆಗೆ ಯಾರು ಬೇಕೆಂದು ಜನರೇ ನಿರ್ಧರಿಸುತ್ತಾರೆ ಎಂದು ನೇರ ಉತ್ತರ ನೀಡಿದರು.ವೈಯಕ್ತಿಕ ವಿಚಾರ ನಿಂದನೆಗೆ ಬಳಕೆ ಆಗಬಾರದಿತ್ತು. ದೊಡ್ಡವರ ಮಾತಿನ ಸಮರದ ಬಗ್ಗೆ ಮಾತಾಡುವುದು ಸೂಕ್ತವಲ್ಲ ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಸರಣಿ ಟ್ವೀಟ್ ಸಮರ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಗ್ರಾಮೀಣ ಭಾಗದ ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಯೋಜನೆಯ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಬೆಮಲ್ ಕಾಂತರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿ ಅವರಿಗೆ ಅನುಕೂಲ ಎನಿಸಿದಲ್ಲಿ ಹೋಗಿದ್ದಾರೆ. ರಾಜಕಾರಣದಲ್ಲಿ ಬೆಳವಣಿಗೆಗೆ ಅನುವು ಆಗುವಲ್ಲಿ ಹೋಗುವುದು ಸರ್ವೇ ಸಾಮಾನ್ಯ ಅನುಕೂಲ ಸಿಂಧು ರಾಜಕಾರಣವೇ ಪಕ್ಷಾಂತರ ಪರ್ವಕ್ಕೆ ಕಾರಣ. ಇದು ಹಿಂದಿನಿಂದ ನಡೆದು ಬಂದ ವಾಡಿಕೆಯಾಗಿದೆ. ಅವರವರ ಅನುಕೂಲಕ್ಕೆ ತಕ್ಕಂತೆ ಹೋಗುವುದು ಸಾಮಾನ್ಯ ಎಂದರು. ಕೋವಿಡ್ ಮೂರನೇ ಅಲೆ ಭೀಕರತೆ ಕಾಣಿಸಲಿಲ್ಲ. ಸಾವು ನೋವು ತೀರ ಕಡಿಮೆ ಎನ್ನುವ ಕಾರಣಕ್ಕೆ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ಸರ್ಕಾರ ಮತ್ತೇ ಕರ್ಫ್ಯೂ ವಿಧಿಸಲು ಚಿಂತಿಸುವುದು ಸರಿಯಲ್ಲ. ಈ ವೈರಸ್ ಜೊತೆ ಹೊಂದಿಕೊಂಡು ಬದುಕು ಸಾಗಿಸುವುದು ಅನಿವಾರ್ಯವಾಗಿದೆ. ಸರ್ಕಾರ ಜಾರಿ ಮಾಡಿದ ನಿಯಮಗಳನ್ನು ಪಾಲಿಸಿ ವೈರಸ್ ವಿರುದ್ದ ಹೋರಾಟ ಮಾಡಬೇಕಿದೆ ಎಂದ ಅವರು ಗ್ರಾಮೀಣ ಭಾಗದ ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಯೋಜನೆಯ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಮ್ಮ, ಉಪಾಧ್ಯಕ್ಷ ಪಾಂಡುರಂಗಯ್ಯ, ಸದಸ್ಯರಾದ ಗೀತಾ, ಯತೀಶ್, ಶಿವಲಿಂಗಯ್ಯ, ನಾಗರಾಜು, ಶಶಿಕಲಾ, ನೇತ್ರಾವತಿ, ವಿಮಲ, ಮಂಜುಳಾಬಾಯಿ, ತಾಪಂ ಮಾಜಿ ಸದಸ್ಯ ರೆಹಮತ್, ಮುಖಂಡರಾದ ಶಿವಾಜಿರಾವ್, ಗುತ್ತಿಗೆದಾರ ಅಶ್ವಕ್ ಪಾಷಾ ಇತರರು ಇದ್ದರು.