ಶಿರಾ : ಕನ್ನಡ ನಾಡಿನ ಎಲ್ಲರೂ ಕನ್ನಡ ಕಟ್ಟುವಂತಹ ಕಾರ್ಯ ಮಾಡಬೇಕು. ಅಂತಹ ಕಾರ್ಯವನ್ನು ಕಲ್ಪತರು ನಾಡಿನ ಹೆಮ್ಮಯ ರಾಜ್ಯಮಟ್ಟದ ಚಿಗುರು ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗವು ಮಾಡುತ್ತಿದ್ದು, ಬಳಗದ ಅಧ್ಯಕ್ಷ ಕೆ.ಎಸ್.ಚಿದಾನಂದ ರವರ ಕನ್ನಡ ಕಟ್ಟುವ ಕಾರ್ಯ ಶ್ಲಾಘನೀಯವಾದುದು ಎಂದು ವಿದ್ಯಾವಾಚಸ್ಪತಿ ಕವಿತಾ ಕೃಷ್ಣ ಹೇಳಿದರು.
ಅವರು ಚಿಗುರು ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ನಗರದ ಕನ್ನಡ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ, ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಜಗತ್ತಿನಲ್ಲಿ ನುಡಿದಂತೆ ಬರೆಯುವ, ಬರೆದಂತೆ ನುಡಿಯುವ ಭಾಷೆ ಎಂದರೆ ಅದು ಕನ್ನಡ ಭಾಷೆ. ಕನ್ನಡ ಭಾಷೆ ಸರ್ವ ಶ್ರೇಷ್ಠವಾದುದು. ನಾಡಿನ ಏಳು ಕೋಟಿ ಜನರು ಮಾತನಾಡುವ ಭಾಷೆ ಕನ್ನಡ. ಸುಂದರ ಲಿಪಿಯನ್ನು ಹೊಂದಿರುವಂತಹದ್ದು ಎಂದ ಅವರು ಇಂದಿನ ಯುವ ಕವಿಗಳು ಪದ್ಯದ ಬರವಣಿಗೆ ಜೊತೆ ಜೊತೆಗೆ ಗದ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಮನುಷ್ಯ ಜೀವನಾನುಭವವೇ ಅವನ ಕಾವ್ಯದ ಅಭಿವ್ಯಕ್ತಿಯಾಗಬೇಕು. ಹೆಚ್ಚು ಓದುವವನು ಉತ್ತಮವಾಗಿ ಬರೆಯಲು ಸಾಧ್ಯ ಕೇವಲ ಪದಗಳ ಜೋಡಣೆ ಕಾವ್ಯವೆನಿಸಿಕೊಳ್ಳಲಾರದು. ಅದಕ್ಕೊಂದು ಸಂಸ್ಕಾರ ಪ್ರಾಪ್ತವಾದಾಗ ಕಾವ್ಯತ್ವ ಜೀವಂತಿಕೆ ಪಡೆಯುತ್ತದೆ. ಆ ಸಂಸ್ಕಾರ ನೀಡುವಂತಹ ಕೆಲಸವನ್ನು ಚಿಗುರು ಬಳಗ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಚಿಗುರು ಬಳಗದ ಅಧ್ಯಕ್ಷ ಕೆ.ಎಸ್.ಚಿದಾನಂದ ಅವರು ಮಾತನಾಡಿ ನಾವು ಈ ನಾಡು-ನುಡಿಗೆ ಏನಾದರು ಕೊಡುಗೆ ಕೊಡುವುದು ಪ್ರತಿಯೊಬ್ಬರ ಧರ್ಮ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಒಂದು ಗಂಟೆ ಕನ್ನಡದ ಕೆಲಸಕ್ಕೆ ಮೀಸಲಿಡಬೇಕು. ನಮ್ಮ ದುಡಿಮೆಯ ಶೇ. ಒಂದು ಭಾಗವನ್ನು ಈ ನಾಡಿನ ಏಳಿಗೆಗೆ ಮೀಸಲಿಟ್ಟರೆ ಈ ಸಮೃದ್ದಿಯ ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚಿಗುರು ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದಿಂದ ಶಿಕ್ಷಣ ಚಿಂತಕ ಡಾ.ಪಿ.ಹೆಚ್.ಮಹೇಂದ್ರಪ್ಪ ಅವರಿಗೆ, ಚಿಗುರು ಶಿಕ್ಷಣ ರತ್ನ ಪ್ರಶಸ್ತಿ, ಶಿರಾದ ವಂಶವೃಕ್ಷ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಮಾಲಿನಿ.ಎಸ್ ಅವರಿಗೆ ಚಿಗುರು ಸೇವಾರತ್ನ ಪ್ರಶಸ್ತಿ ಹಾಗೂ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾದ ದೇವರಾಜು.ಎನ್. ಅವರಿಗೆ ಚಿಗುರು ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಮಂಜಿನ ಹನಿಗಳು, ಕೆ.ಎಸ್.ಚಿದಾನಂದ ಅವರ ಸಂಪಾದಿತ ಕನ್ನಡ ಸಿರಿ ಮಕ್ಕಳ ಕವನ ಸಂಕಲನ ಹಾಗೂ ಆಸೆಯ ಕಂಗಳು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರೋ. ಕೆ.ಹನುಮಂತರಾಯಪ್ಪ, ಡಾ.ಬಿ.ಜಿ.ಗೋವಿಂದಪ್ಪ, ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಹಿರಿಯ ಕವಿ ಎನ್.ನಾಗಪ್ಪ, ಬಿ.ಆರ್.ಸಿ. ಕುಮಾರ್.ಎನ್, ಹಿರಿಯ ಕವಿ ಕಟಾವೀರನಹಳ್ಳಿ ನಾಗರಾಜು, ಡಾ.ಬಿ.ಕೆ.ಮಂಜುನಾಥ, ಅರ್ಪಣ.ಕೆ, ನಳಿನ.ಎನ್, ಸಿದ್ದಗಂಗ.ಹೆಚ್.ಸಿ, ನಳಿನ ನಾಗರಾಜು, ದೊಡ್ಡಬಾಣಗೆರೆ ತಿಪ್ಪೇಸ್ವಾಮಿ, ಸಿಂಧು, ಭಾರತಿ, ಕಸಾಪ ನೂತನ ಅಧ್ಯಕ್ಷ ಪಾಂಡುರಂಗಪ್ಪ, ರಶ್ಮಿ ಕುಮಾರ್, ಹನುಮಂತರಾಜು.ಬಿ.ಆರ್. ಮತ್ತಿತರರು ಹಾಜರಿದ್ದರು.