
ಶಿರಾ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು ನೀವು ನನಗೆ ಮತ ಕೊಟ್ಟು ಗೆಲುವು ತಂದು ಕೊಟ್ಟರೆ, ನಿಮ್ಮ ಪ್ರತಿನಿಧಿಯಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತುಮಕೂರು ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎನ್. ಲೋಕೇಶ್ ಗೌಡ ಹೇಳಿದರು.
ಅವರು ತಾಲೂಕಿನ ತಡಕಲೂರು, ದ್ವಾರನಕುಂಟೆ, ಹುಲಿಕುಂಟೆ ಬರಗೂರು, ದೊಡ್ಡಬಾಣಗೆರೆ ನಾದೂರು, ಹೊಸಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಗುರುವಾರ ಗ್ರಾ.ಪಂ. ಸದಸ್ಯರನ್ನು ಭೇಟಿ ಮಾಡಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳು ಬಲಿಷ್ಠವಾದಾಗ ದೇಶದ ಅಭಿವೃದ್ದಿ ಸಾಧ್ಯ ಎಂಬುದನ್ನು ಮನಗಂಡಿರುವ ನನಗೆ ವಿಧಾನಪರಿಷತ್ ಚುನಾವಣೆಯಲ್ಲಿ ಮತನೀಡಿ ಜಯಶಾಲಿಯನ್ನಾಗಿ ಮಾಡಿದರೆ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಮಾಡಿಸುವ ಹಾಗೂ 15ನೇ ಹಣಕಾಸು ನಲ್ಲಿ ಹೆಚ್ಚು ಅನುದಾನ ಕೊಡಿಸುವ ಗುರಿ ಹೊಂದಿದ್ದು ಗ್ರಾಮ ಪಂಚಾಯತಿ ಸದಸ್ಯರು ಬೆಂಬಲಿಸಬೇಕೆಂದರು.
ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಮಾತನಾಡಿ ಬಿಜೆಪಿ ಸರಕಾರ ಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಕೆರೆ ಭರ್ತಿ ಮಾಡಿದೆ ಇದು ಬಿಜೆಪಿ ಸರಕಾರದ ಕೊಡುಗೆಯಾಗಿದ್ದು ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳ ನೂರಾರು ಗ್ರಾಮಗಳ ಕುಡಿಯುವ ನೀರಿನ ಬವಣೆ ನೀಡಲಿದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ. ಇದಲ್ಲದೆ ಶಿರಾ ತಾಲೂಕಿನ ಮಹತ್ವಾಕಾಂಕ್ಷೆಯ ಅಪ್ಪರ ಭದ್ರ ನೀರಾವರಿ ಯೋಜನೆ ಕಾಮಗಾರಿ ಸಾಗುತ್ತಿದ್ದು, ತಾಲೂಕಿನ 65 ಕೆರೆಗಳು ನೀರಿನ ಭಾಗ್ಯ ಕಾಣಲಿವೆ. ಇಂತಹ ಮಹತ್ವದ ಯೋಜನೆಗಳನ್ನು ಕೊಟ್ಟ ಬಿಜೆಪಿ ಸರಕಾರಕ್ಕೆ ಮತ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಎನ್. ಲೋಕೇಶ್ ಗೌಡ ರವರನ್ನು ಗೆಲ್ಲಿಸುವಂತೆ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಮನವಿ ಮಾಡಿದ ಅವರು. ಎನ್.ಲೋಕೇಶ್ ಗೌಡ ಗೆಲುವು ಸಾಧಿಸಿದರೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಶಿರಾ ತುಮಕೂರು ಮತ್ತು ತುಮಕೂರು ಚಿತ್ರದುರ್ಗ ರೈಲ್ವೆ ಮಾರ್ಗ ಯೋಜನೆಯನ್ನು ಪೂರ್ಣಗೊಳಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಎಸ್‌ಆರ್ ಗೌಡ, ತೆಂಗು ಮತ್ತು ನಾರು ನಿಗಮ ಮಂಡಳಿ ಅಧ್ಯಕ್ಷ ಬಿಕೆ ಮಂಜುನಾಥ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮುಖಂಡ ಪ್ರಕಾಶ್ ಗೌಡ, ಚಂಗಾವರ ಮಾರಣ್ಣ, ಮದಲೂರು ಮೂರ್ತಿ ಮಾಸ್ಟರ್, ಮದ್ದೆವಳ್ಳಿ ರಾಮಕೃಷ್ಣಪ್ಪ, ತರೂರು ಬಸವರಾಜ್, ಮಾಲಿ ಭರತ್, ಮಾಲಿ ಸಿ ಎಲ್ ಗೌಡ, ನಿಡಗಟ್ಟೆ ಚಂದ್ರಶೇಖರ್, ಲಿಂಗದಹಳ್ಳಿ ಸುಧಾಕರ್ ಗೌಡ, ಹಾರೋಗೆರೆ ಮಾರಣ್ಣ ಸೇರಿದಂತೆ ಹಲವರು ಹಾಜರಿದ್ದರು.