ಹಾನಿಗೊಳಗಾದ ಬೆಳೆಗೆ ಸರಕಾರ ಪರಿಹಾರ ನೀಡಲಿ : ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ವಾಯುಭಾರ ಕುಸಿತದ ಪರಿಣಾಮವಾಗಿ ಬಿದ್ದ ಮಳೆಯಿಂದಾಗಿ ಹಾನಿಗೊಳಗಾಗಿರುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ನೀಡುವ ಮೂಲಕ ರೈತನ ನೆರವಿಗೆ ಸರಕಾರ ಧಾವಿಸಬೇಕೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತ ಬೆಳೆದಿದ್ದ ರಾಗಿ,ಭತ್ತ, ಜೋಳ, ಹಾಗೂ ಹೂವು, ಸೇರಿದಂತೆ ಅನೇಕ ಬೆಳೆಗಳು ತೀವ್ರತರವಾದ ಮಳೆಯಿಂದ ಹಾನಿಗೊಳಗಾಗಿವೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದ ರೈತಾಪಿಗಳು ಮಳೆಯಿಂದ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಕೋವಿಡ್ ಸಂದರ್ಭದಲ್ಲಿ ಹಳ್ಳಿಗಳತ್ತ ಮುಖ ಮಾಡಿದ್ದ ನಗರ ವಾಸಿಗಳು ಉತ್ತಮ ಬೆಳೆ ಬೆಳೆದಿದ್ದರು. ಆದರೇ ಮಳೆಯ ತೀವ್ರತೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಉದರಪೋಷಣೆಗೆ ವರ್ಷಪೂರ್ತಿ ಆಹಾರವಾಗಬೇಕಿದ್ದ ರಾಗಿ,ಭತ್ತ, ಜೋಳ ಮತ್ತಿತರ ಬೆಳೆಗಳು ನೆಲಕಚ್ಚಿ ಕೊಳೆತು ನಾಶವಾಗಿವೆ. ಇನ್ನು ಜಾನುವಾರುಗಳಿಗೆ ಮೇವಾಗಬೇಕಿದ್ದ ಹುಲ್ಲು ಸಹ ನೀರಿನಲ್ಲಿ ಕೊಳೆತು ಅಲಭ್ಯವೆನ್ನುವಂತಾಗಿದೆ ಎಂದರು.
ಗೊಬ್ಬರದ ಬೆಲೆ ಏರಿಕೆ ನಡುವೆಯೂ ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತನ ಪಾಲಿಗೆ ತೀವ್ರತರವಾದ ಮಳೆ ಶಾಪವಾಗಿ ಪರಿಣಮಿಸಿದೆ. ತುರುವೇಕೆರೆ ತಾಲೂಕೊಂದರಲ್ಲಿ ವಾಡಿಕೆ ಮಳೆ 655 ಮಿ.ಮೀ ಆಗಿದ್ದು ಈ ಬಾರಿ 1036 ಮಿ.ಮೀ ಮಳೆ ಬಿದ್ದಿದೆ.10 ತೋಟಗಾರಿಕಾ ಬೆಳೆಯಾದ ಅಡಿಕೆ ನೀರಿನ ಹೆಚ್ಚಳದಿಂದಾಗಿ ಕೊಳೆಯಲಾರಂಬಿಸಿದೆ. ರಾಗಿ,ಭತ್ತದ ಬೆಳೆ ನಾಶವಾಗಿರುವ ರೈತನಿಗೆ ಪ್ರತಿ ಎಕರೆಗೆ ಕನಿಷ್ಟ 25 ಸಾವಿರರೂ ಹಾಗೂ ಹೂವು ಮತ್ತಿತರ ಬೆಳೆ ನಾಶಕ್ಕೆ ಪ್ರತಿ ಎಕರೆಗೆ 50 ಸಾವಿರ ಪರಿಹಾರವನ್ನು ಸರಕಾರ ನೀಡಲು ಮುಂದಾಗಬೇಕಿದೆ. ಬೆಳೆ ನಾಶಕ್ಕೆ ಪರಿಹಾರ ನೀಡುವುದಾಗಿ ಬರಿ ಹೇಳಿಕೆ ಕೊಡುವುದಕ್ಕಷ್ಟೆ ಸರಕಾರ ಸೀಮಿತವಾದಂತಿದೆ. ಮಳೆಯ ತೀವ್ರತೆಯಿಂದ ಬೆಳೆದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತನಿಗೆ ಪರಿಹಾರ ನೀಡುವ ಕಾರ್ಯವನ್ನು ಶೀಘ್ರ ಅನುಷ್ಟಾನಗೊಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ಯುವಘಟಕದ ಅಧ್ಯಕ್ಷ ರಮೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಪ್ರುಲ್ಲಾ, ಪ.ಪಂ. ಸದಸ್ಯರಾದ ಎನ್.ಆರ್.ಸುರೇಶ್. ಮಧೂಸೂಧನ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಮಾಯಣ್ಣಗೌಡ ಮತ್ತಿತರಿದ್ದರು.