ಕುಪ್ಪೂರು ಶ್ರೀಗಳು ಸಮಾಜಿಕ ಕ್ಷೇತ್ರದ ಬೆಳವಣಿಗೆಗೆ ಸಾರ್ಥಕ ಬದುಕು ಸವೆಸಿದ್ದರು : ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
ಚಿಕ್ಕನಾಯಕನಹಳ್ಳಿ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಯನ ಶೀಲತೆಯಿಂದಲೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶ್ಲಾಘಿಸಿದರು.
ಕುಪ್ಪೂರಿನಲ್ಲಿ ಆಯೋಜಿಸಲಾಗಿದ್ದ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಈಗಿರುವ ಮರಿ ಸ್ವಾಮಿಯ ವಯಸ್ಸಿನಲ್ಲೇ ಯತೀಶ್ವರರಿಗೆ ಪಟ್ಟ ಕಟ್ಟಿದ್ದರು. ಇವರ ಪೂರ್ವಶ್ರಮದ ಗುರುಗಳು ಶ್ರೀ ಚಂದ್ರಶೇಖರ ಸ್ವಾಮಿಗಳ ಆಧ್ಯಾತ್ಮ ಸಾಧನೆಯ ಆಸ್ತಿ ಭಾರದ ಮೇಲೆ, ಯತೀಶ್ವರರ ಸೃಜನ ಶೀಲ ಕೆಲಸಗಳು ರೂಪ ತಾಳಿದುವು. ಅವರ ಶರಣ ಜೀವನ ಪರಿಶುದ್ದ ಆಚಾರ, ನಡೆ ನುಡಿಗಳೊಂದಿಗೆ ಸದಾ ಕಾಯಕ ನಿರತರಾಗಿ ಬೇಡಿ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುತ್ತಾ ಸಮಾಜದ ಸರ್ವತೋಮುಖ ಬೆಳವಣಿಗೆಯತ್ತ ಗಮನಹರಿಸಿ ಸಾರ್ಥಕ ಬದುಕನ್ನು ಯತೀಶ್ವರರು ಸವೆಸಿದರು.
ಉತ್ತರ ಕರ್ನಾಟಕದಲ್ಲಿ ಶ್ರೀಗಳನ್ನು ಅಜ್ಯಯ್ಯ ಎಂದು ಸಂಭೋಧಿಸುತ್ತಾರೆ. ದಕ್ಷಿಣ ಭಾಗದಲ್ಲಿ ಶ್ರೀಗಳನ್ನು ಬುದ್ದಿ, ಸ್ವಾಮಿಗಳೇ ಎಂದು ಕರೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಕುಪ್ಪೂರು ಅಜ್ಜಯ್ಯ ಎಂದು ಕರೆದಿರುವುದು ಮರುಳ ಸಿದ್ದೇಶ್ವರರ ವಿಶೇಷ ಪರಂಪರೆಯಾಗಿದೆ. ಇವರು ಪವಾಡ ಪುರುಷರಾಗಿದ್ದಾರೆ. ಒಬ್ಬರೆ ಸ್ವಾಮಿಗಳು ಎರಡು ಕಡೆ ಹಾಗು ಲಿಂಗೈಕ್ಯರಾದ ನಂತರವೂ ದರ್ಶನ ಕೊಡುವುದು ಕೆಲವೇ ಕೆಲವು ಪವಾಡ ಪುರುಷರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಶ್ರೀಗಳು ತಪಸ್ವಿಗಳು, ಸಹನಾಶೀಲರಾಗಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಪಟ್ಟಾಧಿಕಾರ ಸ್ವೀಕರಿಸಿ ಚಂದ್ರಶೇಖರ ಶ್ರೀಗಳ ಮಾರ್ಗದರ್ಶನದಲ್ಲಿ ಮುನ್ನಡೆದರು. ಹೇಮಾವತಿ ಕುಡಿಯುವ ನೀರಿನ ಹೋರಾಟದಲ್ಲಿ ಪಾದಯಾತ್ರೆ ನಡೆಸಿದ್ದರು. ಹಾಲ್‌ಕುರ್ಕೆ ಭಾಗದ ಕಾಮಾಗಾರಿ ಆರಂಭ ಮಾಡುವ ಸಮಯದಲ್ಲಿ ಶ್ರೀಗಳ ಅನುಪಸ್ಥಿತಿ ನಮಗೆ ಅತೀವ ನೋವುಂಟು ಮಾಡುತ್ತಿದೆ. ನಮಗೆ ಉತ್ತಮ ಹಿತೈಷಿಯಾಗಿದ್ದ ಇವರು ಸಮಾಜವನ್ನು ತಿದ್ದಿದ್ದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಅಧ್ಯಯನ ಮಾಡುತ್ತಿರುವ 30 ವಿದ್ಯಾರ್ಥಿಗಳನ್ನು ಕುಪ್ಪೂರಿನ ಸಿದ್ದಗಂಗಾ ಪ್ರೌಢಶಾಲೆಗೆ ಕಳುಹಿಸಿಕೊಡುವಂತೆ ಸಿದ್ದಗಂಗಾ ಶ್ರೀಗಳಲ್ಲಿ ಮನವಿ ಮಾಡಲಾಗಿದೆ ಎಂದರು.
ಮೂರು ಸಾವಿರ ಮಠದ ಶ್ರೀಮಾನ್ ಮಹಾರಾಜ ನಿರಂಜನ ಜಗದ್ಗುರು ಮಾತನಾಡಿ ಕುಪ್ಪೂರು ಕ್ಷೇತ್ರದಲ್ಲಿ ತಪಸ್ವಿಗಳ ಅಂಶವಿದೆ. ಚಂದ್ರಶೇಖರ ಸ್ವಾಮಿಗಳ ಮಾನಸ ಪುತ್ರರಾಗಿ ಮಠದಲ್ಲಿ ಯತೀಶ್ವರರು ಶಿವಪೂಜೆ ಮಾಡುತ್ತಿದ್ದರು. ಇದು ಭಕ್ತರು ಮಠಕ್ಕೆ ಬರಲು ಪ್ರೇರಣೆಯಾಗಿತ್ತು. ಸಮಾಜದ ಸೇವೆಗೆ ಪ್ರಾಧಾನ್ಯತೆ ನೀಡಿ ವಿರಮಿಸಿದರು ಎಂದು ಗದ್ಗದಿತರಾದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಅತ್ಯಂತ ಕ್ರಿಯಾಶೀಲವಾಗಿ ಬಳಸುವುದರಲ್ಲಿ ಶ್ರೀ ಗಳು ಮುಂಚೂಣಿಯಲ್ಲಿದ್ದರು. ಸಮಾಜದ ಆಗು ಹೋಗುಗಳನ್ನು ಮತ್ತು ಪೂಜಾ ವಿಧಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಂಡರು ಎಂದರು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಷಡಾಕ್ಷರ ಮಠದ ರುದ್ರಮುನಿ ಮಹಾಸ್ವಾಮಿಗಳು, ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬೀರೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ದೊಡ್ಡಗುಣಿ ಮಠದ ರೇವಣ ಸಿದ್ದೇಶ್ವರ ಸ್ವಾಮಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಶ್ರೀಗಳು ದಿವ್ಯ ಸಾನಿದ್ಯ ವಹಿಸಿದ್ದರು. ಈ ವೇಳೆ ಕುಪ್ಪೂರು ವಾಣಿ ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು.