ವಿಜಯದಶಮಿ ನವರಾತ್ರಿ ಉತ್ಸವ : ನಗರದ ವಿವಿಧ ದೇವರುಗಳ ಸಾಮೂಹಿಕ ಮೆರವಣಿಗೆ
ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ
ತುಮಕೂರು : ದಸರಾ ಸಮಿತಿ ವತಿಯಿಂದ ವಿಜಯದಶಮಿ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಟೌನ್‌ಹಾಲ್ ವೃತ್ತದಲ್ಲಿ ವಿಜಯದಶಮಿಯ ಪ್ರಯುಕ್ತ ನಡೆದ ನಗರದ ಹೆಚ್ಚು ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆಗೆ ಬೆಂಗಳೂರಿನ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಟೌನ್‌ಹಾಲ್ ವೃತ್ತದಿಂದ ಟ್ರ್ಯಾಕ್ಟರ್‌ಗಳ ಮೇಲೆ ಕುಳಿತು ಹೊರಟ ದೇವರುಮೂರ್ತಿಗಳ ಸಾಮೂಹಿಕ ಮೆರವಣಿಗೆಯು ಎಂ.ಜಿ. ರಸ್ತೆ, ಗುಂಚಿ ಸರ್ಕಲ್, ಹೊರಪೇಟೆ ಮುಖೇನ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಸಾಗಿ ಸಾಮೂಹಿಕ ಶಮೀಪೂಜೆ ನಡೆದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ತಲುಪಿತು.
ಟ್ರ್ಯಾಕ್ಟರ್‌ಗಳಲ್ಲಿ ಸಾಗಿದ ದೇವರುಗಳ ಸಾಮೂಹಿಕ ಮೆರವಣಿಗೆ ಯುದ್ದಕ್ಕೂ ನಡೆದ ವಾದ್ಯಗೋಷ್ಠಿ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.
ವಿಜಯದಶಮಿಯ ಸಾಮೂಹಿಕ ಮೆರವಣಿಗೆ ನೋಡಲು ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಗುಂಚಿ ವೃತ್ತ, ಹೊರಪೇಟೆ, ಜನರಲ್ ಕಾರ್ಯಪ್ಪ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ನೆರೆದಿದ್ದರು.
ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನಗರದ ದೇವರುಗಳ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು.
ವಿಜಯದಶಮಿ ಮೆರವಣಿಗೆ ಚಾಲನೆಗೊಂಡ ನಂತರ ಮಾತನಾಡಿದ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಚಿದಾನಂದ್, ಈ ಬಾರಿ ವಿಜಯ ದಶಮಿಯ ಮೆರವಣಿಗೆಯು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು, ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಕಲಾ ತಂಡಗಳ ಸದಸ್ಯರು ಸೇರಿದಂತೆ ಭಕ್ತಾದಿಗಳಿಗೆ ಸಮಿತಿ ವತಿಯಿಂದ ಮಾಸ್ಕ್ಗಳನ್ನು ವಿತರಿಸಲಾಯಿತು ಎಂದರು.
ಮೆರವಣಿಗೆಯಲ್ಲಿ ಯಾವುದೇ ರೀತಿಯ ಲೋಪ ದೋಷ ಉಂಟಾಗದಂತೆ ಸಮಿತಿಯಿಂದ ಮುಂಜಾಗ್ರತಾ ಕ್ರಮ ವಹಿಸಿ ಹಬ್ಬವನ್ನು ಆಚರಿಸಲಾಯಿತು ಎಂದರು.
ಮೆರವಣಿಗೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಎಸ್ಪಿ ರಾಹುಲ್‌ಕುಮಾರ್ ಶಹಪೂರ್‌ವಾಡ್, ದಸರಾ ಸಮಿತಿಯ ಬಿ.ಎಸ್.ಮಂಜುನಾಥ್, ಕೋರಿ ಮಂಜುನಾಥ್, ಬಿ.ಎಸ್. ಮಹೇಶ್, ಚೇತನ್, ಹೆಚ್.ಕೆ. ಬಸವರಾಜು, ಕೆ.ಎನ್. ಗೋವಿಂದರಾವ್, ಬಸವರಾಜು, ಮಲ್ಲಿಕಾರ್ಜುನ್, ವಿಶ್ವನಾಥ್, ಟಿ.ಎಸ್. ಸದಾಶಿವಯ್ಯ ಮತ್ತಿತರರು ಭಾಗವಹಿಸಿದ್ದರು.