
ಬೆಂಗಳೂರು : ದಸರಾ ಹಬ್ಬದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದು 1ರಿಂದ 5ನೇ ತರಗತಿವರೆಗಿನ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿಯಂತೆ ಮುಖ್ಯಮಂತ್ರಿಗಳು ದಸರಾ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಜತೆಗೆ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದು ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ ಎಂದು ತಿಳಿಸಿದರು.
ಶಾಲೆಗಳನ್ನು ಪ್ರಾರಂಭಿಸಬೇಕೆಂಬುದರ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಮುಖ್ಯವಾಗಿರುತ್ತದೆ. ಅಂತಿಮವಾಗಿ ನಾವು ಯಾವ ರೀತಿ ಪ್ರಾರಂಭಿಸಬೇಕು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರಕ್ಕೆ ಆತುರವಿಲ್ಲ. ಏನೇ ನಿರ್ಧಾರ ಕೈಗೊಂಡರೂ ಅದು ವಿದ್ಯಾರ್ಥಿಗಳ ಹಿತದೃಷ್ಟಿಗೆ ಒಳಪಟ್ಟಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂತಸಪಟ್ಟರು.
ಕರ್ನಾಟಕ ಇಲ್ಲವೇ ದೇಶವನ್ನು ಬಿಟ್ಟು ಕೊರೊನಾ ಹೋಗಿಲ್ಲ. ಇದು ಈಗಲೂ ವಿಶ್ವವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗವಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾಕಷ್ಟು ಸುರಕ್ಷಿತ ವಲಯದಲ್ಲಿದೆ. ನಮ್ಮ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳ ಪರಿಣಾಮ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದು ಮಾಹಿತಿ ನೀಡಿದರು.
ನಾನು ಸಾರ್ವಜನಿಕರಲ್ಲಿ ಈಗಲೂ ಕೂಡ ಮನವಿ ಮಾಡುವುದೇನೆಂದರೆ ಕೋವಿಡ್ ಮಹಾಮಾರಿ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ. ನಿಯಂತ್ರಣಕ್ಕೆ ಬಂದಿದೆ ಎಂದು ಯಾರೊಬ್ಬರೂ ಉದಾಸೀನ ತೋರಬಾರದು. ಸಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಲಸಿಕೆ ಹಾಕಿಸಿಕೊಳ್ಳುವುದನ್ನು ಯಾರೊಬ್ಬರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಶೇ.83ರಷ್ಟು ಜನರಿಗೆ ಮೊದಲ ಹಂತದ ಲಸಿಕೆಯನ್ನು ನೀಡಲಾಗಿದೆ. ಅದೇ ರೀತಿ ಶೇ.38ರಷ್ಟು ಎರಡನೇ ಹಂತದ ಲಸಿಕೆ ಕೊಡಲಾಗಿದೆ. ಸರ್ಕಾರದ ದಿಟ್ಟ ಕ್ರಮಗಳ ಪರಿಣಾಮ ಲಸಿಕೆ ವಿತರಣೆಯನ್ನು ಯಶಸ್ವಿಯಾಗಿ ವಿತರಿಸಿದ್ದೇವೆ ಎಂದು ಸುಧಾಕರ್ ತಿಳಿಸಿದರು.