ಕೊವೀಡ್ ನಿಂದ ಮೃತಪಟ್ಟ 17 ಮಡಿವಾಳ ಕುಟುಂಬಗಳಿಗೆ ಕ್ಷೇಮಾಭಿವೃದ್ದಿ ಸಂಘದಿಂದ ಹಣದ ನೆರವು
ತುಮಕೂರು : ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ದಿ ಸಂಘ(ರಿ)ದವತಿಯಿಂದ ಕೋರೋನ ಸಂದರ್ಭದಲ್ಲಿ ಮೃತಪಟ್ಟ ಸಮುದಾಯದ ಕುಟುಂಬಗಳಿಗೆ ಸಾಂತ್ವಾನದ ಜೊತೆಗೆ,ಕಿರು ಹಣಕಾಸು ಸಹಾಯ ಮಾಡುವ ಕಾರ್ಯಕ್ರಮ ವನ್ನು ಜಿಲ್ಲಾ ಮಡಿವಾಳರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಜಿಲ್ಲಾ ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಲಕ್ಷö್ಮಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋರೋನದಿಂದ ಮೃತಪಟ್ಟ ತುಮಕೂರು ಜಿಲ್ಲೆಯ 17 ಮಡಿವಾಳ ಕುಟುಂಬಗಳಿಗೆ ದನ ಸಹಾಯ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ರಂಗಸ್ವಾಮಯ್ಯ,ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕುಲಕಸುಬನ್ನೇ ನಂಬಿ ಬದುಕುತ್ತಿದ್ದು,ಕೋವಿಡ್‌ನಿಂದ ಸಂಕಷ್ಟಕ್ಕೆ ದೂಡಲ್ಪಟ್ಟ ಕುಟುಂಬಗಳನ್ನು ಗುರುತಿಸಿ,ನಮ್ಮ ಸ್ವಂತ ಹಣದಿಂದ ಕೈಲಾದ ಧನಸಹಾಯ ಮಾಡಲಾಗುತ್ತಿದೆ.ಈಗಾಗಲೇ ಮೈಸೂರು, ಮಂಡ್ಯ, ರಾಮನಗರ,ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಹಣಕಾಸು ನೇರವು ನೀಡಲಾಗಿದೆ. ದೂರದ ಜಿಲ್ಲೆಗಳ ಮಾಹಿತಿ ಕಲೆ ಹಾಕಿ,ಡಿಡಿ ಮೂಲಕ ನೆರವಿನ ಹಣ ಕಳುಹಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ,ಸಮುದಾಯದೊಂದಿಗೆ ನಾವು ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಟಿ.ಆರ್.ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂದು ಹೋರಾಟ ಆರಂಭಿಸಿದ್ದು ನಮ್ಮ ಸಂಘ, ಇದರ ಫಲವಾಗಿ ಡಾ.ಅನ್ನಪೂರ್ಣಮ್ಮ ಅವರು ವರದಿ ತಯಾರಿಸಿ,ಸರಕಾರಕ್ಕೆ ಸಲ್ಲಿಸಿದರು.ಆದರೆ ಕೆಲವರ ಚಿತಾವಣೆ ಯಿಂದ ಹೋರಾಟ ನಿರೀಕ್ಷಿತ ಫಲ ನೀಡಿಲ್ಲ.ಈ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು, ನೀವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಾಗಿದೆ.ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಮ್ಮ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಆದರೆ ಕರ್ನಾಟಕದಲ್ಲಿ ಮಾತ್ರ 2ಎ ನಲ್ಲಿದೆ.ಸುಮಾರು 15-18 ಜನಸಂಖ್ಯೆಯನ್ನು ಹೊಂದಿರುವ ನಾವುಗಳು ಒಗ್ಗೂಡಿ ಬೀದಿಗಿಳಿದರೆ ಯಶಸ್ಸು ಸಾಧ್ಯ.ಚುನಾವಣೆ ಸಂದರ್ಭದ ಭರವಸೆಗಳನ್ನು ನಂಬಬೇಡಿ ಎಂದು ಕಿವಿ ಮಾತು ಹೇಳಿದರು.
ಕೋರೋನ ಸಂಕಷ್ಟದಲ್ಲಿರುವ ನಮ್ಮ ಜನತೆ ಜೀವನ ನಡೆಸುವುದು ಕಷ್ಟವಾಗಿರುವಾಗ ಮಾಚಿದೇವ ಅಭಿವೃದ್ದಿ ಮಂಡಳಿಯಿಂದ ಸಾಲವಸೂಲಾತಿಗೆ ಮುಂದಾಗಿದ್ದಾರೆ.ಒಂದು ವೇಳೆ ಅಧಿಕಾರಿಗಳು ಸಾಲ ವಸೂಲಿಗೆ ನಿಮ್ಮ ಬಳಿ ಬಂದರೆ ಈಗ ಕಟ್ಟಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಟಿ.ಆರ್.ಪ್ರಕಾಶ್ ಸಮುದಾಯದ ಜನರಲ್ಲಿ ಧೈರ್ಯ ತುಂಬಿದರು.
ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಲಕ್ಷö್ಮಣ್ ಮಾತನಾಡಿ,ನಾವು ಮಡಿವಾಳರು ಎಂದು ಹೇಳಿಕೊಳ್ಳಲು ಹಿಂಜರಿಯುವುದರಿಂದ ಇಂದು ಸರಕಾರಕ್ಕಾಗಲಿ,ಸಮುದಾಯದಾಗಲ್ಲಾಗಲಿ ನಮ್ಮ ಜನಸಂಖ್ಯೆ ಎಷ್ಟಿದೆ ಎಂಬ ನಿಖರ ಮಾಹಿತಿ ಇಲ್ಲ.ಹಾಗಾಗಿ ಸುಮಾರು 15-18 ಲಕ್ಷ ವಿರುವ ಜನಸಂಖ್ಯೆಗೆ ಕೇವಲ 60 ಸಾವಿರ ಜನರಿಗೆ ಮಾತ್ರ ಕೋವಿಡ್ ಪರಿಹಾರ ನೀಡಿದ್ದಾರೆ. ಇದನ್ನು ಮನಗಂಡೇ ನಮ್ಮ ಜಿಲ್ಲೆಯಲ್ಲಿ ಮಡಿವಾಳರ ಜನಗಣತಿ ಮಾಡಲು ಸಂಘ ಮುಂದಾಗಿ, ಗ್ರಾಮೀಣ ಭಾಗದಲ್ಲಿ ಕಾರ್ಯೋನ್ಮುಖವಾಗಿದೆ. ನಿಖರವಾದ ಜನಸಂಖ್ಯೆ ತಿಳಿದರೆ, ಸರಕಾರವೇ ನಮ್ಮ ಬಳಿ ಬರಲಿದೆ. ಹಾಗಾಗಿ ಜಿಲ್ಲೆಯ ಜನರು ಇದರಲ್ಲಿ ಸಕ್ರಿಯೆವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮಡಿವಾಳ ಸಮಾಜದ ಮಹಿಳಾ ಮುಖಂಡರಾದ ಶ್ರೀಮತಿ ಭವ್ಯ ಮಾತನಾಡಿ,ಸಂಘದವತಿಯಿಂದ ಜಾತಿವಾರು ಜನಗಣತಿ ನಡೆಯುತಿದ್ದು, ಹಿಂಜರಿಕೆ ಬಿಟ್ಟು ಪ್ರತಿ ಮಡಿವಾಳ ಕುಟುಂಬವೂ ತಮ್ಮ ಹೆಸರು ನೊಂದಾಯಿಸಿಕೊಳ್ಳುವ ಮೂಲಕ ನಮ್ಮ ದ್ವನಿಗಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದರು.
ಇದೇ ವೇಳೆ ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಧನಿಯಕುಮಾರ್, ಚಂದ್ರಶೇಖರಗೌಡ,ಕೆಂಪರಾಜು ಅವರುಗಳು, ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ರಂಗಸ್ವಾಮಯ್ಯ, ರಾಜ್ಯಾಧ್ಯಕ್ಷ ಟಿ.ಆರ್.ಪ್ರಕಾಶ್ ಅವರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಜಿಲ್ಲಾ ಮಡಿವಾಳರ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಕೆಂಪನರಸಯ್ಯ,ಕುಲಕಸುಬುದಾರರ ಸಂಘದ ಅಧ್ಯಕ್ಷ ಶಾಂತಕುಮಾರ್,ಮುಖಂಡರಾದ ಪ್ರಭಾಕರ್,ಚಿಕ್ಕಣ್ಣ, ಕಿರಣ್, ರಾಜಣ್ಣ, ಪಾವಗಡ ಶ್ರೀರಾಮಯ್ಯ, ಚಂದ್ರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.